ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತ ಪ್ರಕರಣವನ್ನು ಮ್ಯಾಜಿಸ್ಟೀರಿಯಲ್ ವಿಚಾರಣೆಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ. ವಿಚಾರಣಾಧಿಕಾರಿ ಈ ಆದೇಶ ಹೊರಡಿಸಿದ ದಿನಾಂಕದಿಂದ 3 ತಿಂಗಳೊಳಗಾಗಿ ಮ್ಯಾಜಿಸ್ಟೀರಿಯಲ್ ವಿಚಾರಣೆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ.
ಅತ್ತಿಬೆಲೆ ಪಟಾಕಿ ಅಗ್ನಿ ಅವಘಡ ಆಕಸ್ಮಿಕವಾಗಿ ಉಂಟಾಗಿದೆಯೇ ಅಥವಾ ನಿರ್ಲಕ್ಷ್ಯದಿಂದ ಉಂಟಾಗಿದೆಯೇ, ಪರವಾನಗಿ ನೀಡಲಾಗಿದೆಯೇ, ಈ ಪರವಾನಗಿ ನೀಡುವಿಕೆಯಲ್ಲಿ ಲೋಪ ಉಂಟಾಗಿದ್ದಲ್ಲಿ, ಉಂಟಾಗಿರಬಹುದಾದ ಲೋಪಗಳ ಕುರಿತು, ಈ ಲೋಪಕ್ಕೆ ಕಾರಣರಾದವರ ಬಗ್ಗೆ, ಅವಘಡದಲ್ಲಿ ಉಂಟಾದ ನಷ್ಟದ ಕುರಿತಾದ ಅಂಶಗಳನ್ನೂ ಒಳಗೊಂಡಂತೆ ಸಮಗ್ರವಾಗಿ ಮ್ಯಾಜಿಸ್ಟಿರಿಯಲ್ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನಾಗಿ ಐಎಎಸ್ ಅಧಿಕಾರಿ ಅಮಲಾನ್ ಆದಿತ್ಯ ಬಿಸ್ವಾಸ್ ಅವರರನ್ನು ನೇಮಿಸಲಾಗಿದೆ.
ಬೆಂಗಳೂರು ನಗರ ಜಿಲ್ಲೆ ಅತ್ತಿಬೆಲೆ ಗಡಿಯಲ್ಲಿ ಬಾಲಾಜಿ ಟ್ರೇಡರ್ಸ್ ಪಟಾಕಿ ದಾಸ್ತಾನಿನಲ್ಲಿ 7-10-2023ರಂದು ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಾವಿಗೆ ಕಾರಣಗಳು, ಘಟನಾವಳಿಗಳ ಸರಣಿ ಹಾಗೂ ಸನ್ನಿವೇಶಗಳ ಬಗ್ಗೆ ಮತ್ತು ಬಾಲಾಜಿ ಟ್ರೇಡರ್ಸ್, ಪಟಾಕಿ ದಾಸ್ತಾನು ಮಳಿಗೆಗೆ ಸ್ಫೋಟಕ ಕಾಯ್ದೆ-1884ರ ಸೆಕ್ಷನ್ 6ಬಿ ರನ್ವಯ ಸ್ಥಳ ತನಿಖೆ ನಡೆಸಿ, ಸೂಕ್ತ ದಾಖಲಾತಿಗಳನ್ನು ಪಡೆದು ನಿಯಮಾನುಸಾರ ಪರಿಶೀಲಿಸುವಂತೆ ಸೂಚಿಸಿದೆ.