ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ (ಆರ್‌ಟಿಐ) ಮಾನದಂಡಗಳಿಗೆ ಅನುಗುಣವಾಗಿ ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಈ ರೀತಿಯ ಸೌಲಭ್ಯಗಳ ಕೊರತೆಯಿರುವ ಶಾಲೆಗಳಿಗೆ ಯಾವ ಪೋಷಕರು ತಾನೇ ಮಕ್ಕಳನ್ನು ಕಳುಹಿಸಲು ಮುಂದಾಗುತ್ತಾರೆ? ಎಂದು ಗರಂ ಆಗಿದೆ.
ಆತ್ಮಸಾಕ್ಷಿಗೆ ಆಘಾತ: ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತಂತೆ ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್ ಅವರಿದ್ದ ನ್ಯಾಯಪೀಠ, ಶಾಲೆಗಳ ದುಸ್ಥಿತಿ ಗಮನಿಸಿದರೆ ನಮ್ಮ ಆತ್ಮಸಾಕ್ಷಿಗೆ ಆಘಾತವಾಗುತ್ತಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿತು.
ಸರ್ಕಾರ ಸಲ್ಲಿಸಿರುವ ವರದಿ ಮತ್ತು ಛಾಯಾಚಿತ್ರಗಳನ್ನು ಪರಿಶೀಲಿಸಿದ ನ್ಯಾಯಪೀಠ, ಶಾಲೆಗಳಲ್ಲಿ ಶೌಚಾಲಯಗಳ ಸ್ಥಿತಿ ಅತ್ಯಂತ ಕರುಣಾಜನಕವಾಗಿದೆ. ಶಾಲೆಯ ಶೌಚಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಗಿಡಗಂಟಿಗಳು ಬೆಳೆದಿವೆ. ಈ ರೀತಿಯ ವರದಿ ಸಲ್ಲಿಸಿರುವ ಅಧಿಕಾರಿಯ ಮನೆಯಲ್ಲಿಯೂ ಇದೇ ಪರಿಸ್ಥಿತಿ ಇದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಶೌಚಾಲಯ ನಿರ್ಮಾಣ ವಿಚಾರ ಸಂಬಂಧ ಸರ್ಕಾರ ಕಣ್ಣೊರೆಸುವ ತಂತ್ರ ನಡೆಸುತ್ತಿದೆ. ಕೆಲವು ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಗಳಿಗೆ ನೀರಿನ ಸೌಲಭ್ಯ ಇಲ್ಲ. ಕುಡಿಯುವ ನೀರನ್ನು ಹೊತ್ತು ತರುವ ಪರಿಸ್ಥಿತಿ ಇದೆ. ಈ ರೀತಿಯಲ್ಲಿ ಸೌಕರ್ಯಗಳ ಕೊರತೆಯಿರುವ ಶಾಲೆಗಳಿಂದ ಯಾವ ರೀತಿಯ ಸಮಾಜ ನಿರ್ಮಾಣವಾದಲಿದೆ? ಎಂದು ಪೀಠ ಕೇಳಿತು.
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಮೂರ್ತಿ ಎಂ.ಜೆ.ಎಸ್.ಕಮಲ್, ಸೂಕ್ತ ಶೌಚಾಲಯ ಕಲ್ಪಿಸದ ಕುರಿತು ಅನುಪಾಲನಾ ವರದಿ ಸಲ್ಲಿಸಿರುವ ಅಧಿಕಾರಿಗೆ ಹೇಗೆ ಧೈರ್ಯ ಬಂತು? ಇಂತಹ ಶಾಲೆಗಳಿಗೆ ಅಧಿಕಾರಿಗಳ ಮಕ್ಕಳನ್ನು ಕಳುಹಿಸಲು ಮುಂದಾಗುತ್ತಾರೆಯೇ ಎಂದು ಪಶ್ನಿಸಿದರು. ಅಲ್ಲದೇ, ಇದಕ್ಕೆಲ್ಲ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು. 'ಚಲ್ತಾ ಹೆ' ಎನ್ನುವ ಭಾವನೆ ಅಧಿಕಾರಿಗಳ ಮನಸ್ಸಿನಲ್ಲಿದೆಯೇ ಎಂದು ಪ್ರಶ್ನಿಸಿತು.