ಬೆಂಗಳೂರು: ಆರ್ಥಿಕ ಚಟುವಟಿಕೆ ರಾಜ್ಯದಲ್ಲಿ ಗರಿಗೆದರಬೇಕಾದರೆ ಲಾಕ್‍ಡೌನ್ ಸಡಿಲಿಕೆ ಅನಿವಾರ್ಯ. ಆದರೆ ಈ ವೇಳೆ ಸರ್ಕಾರ ಸಾಕಷ್ಟು ಎಚ್ಚರಿಕೆ ವಹಿಸಿ, ಮುಂದಿನ ಹೆಜ್ಜೆ ಇರಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ
ಬಡವರು ಯಾವುದನ್ನೂ ಖರೀದಿಸುವ ಶಕ್ತಿ ಹೊಂದಿಲ್ಲ. ಅವರಿಗೆ ಖರೀದಿ ಸಾಮರ್ಥ್ಯ ಬರುವಂತಾಗಲು ಸರ್ಕಾರ ಕೂಡಲೇ ಒಂದು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಜನ ಹಸಿವಿನಿಂದ ನರಳುವಂತಾಗುತ್ತದೆ. ಮಾರುಕಟ್ಟೆಯಲ್ಲಿ ಖರೀದಿ ಪ್ರಕ್ರಿಯೆ ಉತ್ತಮವಾಗಿ ನಡೆದಾಗ ಮಾತ್ರ ಸರ್ಕಾರಕ್ಕೆ ತೆರಿಗೆ ಸಂಗ್ರಹ ಸಾಧ್ಯ ಎಂದು ಹೇಳಿದ್ದಾರೆ.
ಲಾಕ್ಡೌನ್ ಇನ್ನಷ್ಟು ಬಿಗಿಯಾದರೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುವ ಅಪಾಯವಿದೆ. ಜನರಲ್ಲಿ ಕೊಳ್ಳುವ ಶಕ್ತಿ ತುಂಬಲು ಒಂದು ವಿಶೇಷ ಆರ್ಥಿಕ ಪ್ಯಾಕೇಜ್‌ನ ಅನಿವಾರ್ಯತೆ ಇದೆ. ಚುನಾಯಿತ ಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡದೇ ಹೋಗಿದ್ದರೆ ರಾಜ್ಯದಲ್ಲಿ ಹಾಹಾಕಾರ ಉಂಟಾಗಿ, ಜನ ಬೀದಿಗಿಳಿದು ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಅಂಥ ಪರಿಸ್ಥಿತಿ ಎದುರಾಗದಂತೆ ಶ್ರಮಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಾಂಪ್ರದಾಯಿಕ ವೃತ್ತಿ ಮಾಡುವವರ ನೆರವಿಗೆ ಸರ್ಕಾರ ನಿಲ್ಲಬೇಕು. ಕೆಲಸ ಕಾರ್ಯಗಳು ಸ್ಥಗಿತಗೊಂಡು ಈ ವಲಯದ ಜನ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಲಾಕ್‌ಡೌನ್ ವಿಸ್ತರಣೆಯಾದಂತೆ ಇವರ ಕಷ್ಟ-ನಷ್ಟ ಹೆಚ್ಚಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಿಗಮ-ಮಂಡಳಿಗಳಲ್ಲಿ ಆಗುತ್ತಿರುವ ಅನಗತ್ಯ ವೆಚ್ಚಕ್ಕೆ ಮೊದಲು ಕಡಿವಾಣ ಹಾಕಬೇಕು. ಅಲ್ಲಿಯ ಅಧಿಕಾರಿಗಳಿಗೆ ನೀಡುತ್ತಿರುವ ಸವಲತ್ತು ನಿಲ್ಲಿಸಿ, ತೀರಾ ಅಗತ್ಯ ಎನಿಸುವ ವಿಚಾರಗಳಿಗೆ ಮಾತ್ರ ವೆಚ್ಚ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳು ಚಿಂತನೆಯನ್ನೇ ಮಾಡುತ್ತಿಲ್ಲ. ಅಧಿಕಾರಿಗಳು ಬರೆದು ಕೊಟ್ಟಿದ್ದನ್ನು ಮಾತ್ರ ಹೇಳುತ್ತಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.