ಬೆಂಗಳೂರು :ಸರ್ಕಾರಿ ವಕೀಲರಿಗೆ ಮಾತ್ರ ಕೋರ್ಟ್ ಕಲಾಪಗಳಲ್ಲಿ ಹಾಜರಾಗಿ ವಾದಿಸಲು ಅವಕಾಶ ನೀಡಿ, ಇತರೆ ವಕೀಲರಿಗೆ ಅವಕಾಶ ನೀಡದ ಕ್ರಮ ವಿರೋಧಿಸಿ ವಕೀಲ ಎನ್ ಪಿ ಅಮೃತೇಶ್ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಮತ್ತು ನ್ಯಾಯಾಂಗ ರಿಜಿಸ್ಟ್ರಾರ್ಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಕೊರೊನಾ ನಿಯಂತ್ರಿಸಲು ಮತ್ತು ಸುರಕ್ಷತೆಯ ದೃಷ್ಟಿಯಿಂದ ಮಾರ್ಚ್ ತಿಂಗಳಲ್ಲಿ ಕೋರ್ಟ್ ಕಲಾಪಗಳನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಮುಖ್ಯ ನ್ಯಾಯಮೂರ್ತಿಗಳ ಸೂಚನೆ ಮೇರೆಗೆ ಎಸ್ಒಪಿ ಮಾರ್ಗಸೂಚಿಗಳ್ನು ಹೊರಡಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ಪ್ರಕರಣಗಳನ್ನಷ್ಟೇ ವಿಚಾರಣೆ ನಡೆಸಲು ಅನುಮತಿಸಲಾಯಿತು.
ಇದಕ್ಕೆ ಸಹಕರಿಸುವಂತೆ ವಕೀಲರಿಗೆ ಕೋರಲಾಗಿತ್ತು. ಕಲಾಪವನ್ನು ವಿಡಿಯೋ ಕಾನ್ಫರೆನ್ಸ್ಗೆ ಸೀಮಿತಗೊಳಿಸಿದ ಬಳಿಕ ವಕೀಲರು ಕಲಾಪದಲ್ಲಿ ಭಾಗಿಯಾಗಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ಸರ್ಕಾರಿ ವಕೀಲರಿಗೆ ಮಾತ್ರ ವಿಶೇಷ ಸ್ಥಾನ ನೀಡಿ, ನೇರವಾಗಿ ಹಾಜರಾಗಿ ವಾದಿಸಲು ಅವಕಾಶ ಕೊಡಲಾಗಿದೆ. ಇದು ಖಾಸಗಿ ವಕೀಲರಿಗೆ ಮಾಡುತ್ತಿರುವ ನೇರ ತಾರತಮ್ಯ ಮತ್ತು ಅನ್ಯಾಯ ಎಂದಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ವಿಚಾರಣೆಯಿಂದ ವಕೀಲರು ಹಲವು ಸಮಸ್ಯೆಗಳ್ನು ಎದುರಿಸುತ್ತಿದ್ದಾರೆ. ಇದೇ ವೇಳೆ ಸರ್ಕಾರಿ ವಕೀಲರು ನೇರವಾಗಿ ಹಾಜರಿದ್ದು, ನ್ಯಾಯಮೂರ್ತಿಗಳ ಎದುರು ತಮ್ಮ ವಾದವನ್ನು ಸ್ಪಷ್ಟವಾಗಿ ಮಂಡಿಸುತ್ತಿದ್ದಾರೆ. ಸರ್ಕಾರಿ ವಕೀಲರು ನೇರವಾಗಿ ಹಾಜರಾಗಿ ವಾದ ಮಂಡಿಸಲು ಅವಕಾಶವಿದೆ ಎಂದ ಮೇಲೆ ಇತರೆ ವಕೀಲರಿಗೆ ಏಕೆ ಫಿಸಿಕಲ್ ಕಲಾಪಕ್ಕೆ ಅವಕಾಶವಿಲ್ಲ ಎಂದು ಪ್ರಶ್ನಿಸಿದ್ದಾರೆ.
ಕೋರ್ಟ್ ಕಲಾಪ ಸುಗಮವಾಗಿ ನಡೆದುಕೊಂಡು ಹೋಗಲು ಎಲ್ಲ ವಕೀಲರೂ ಸಹಕಾರ ನೀಡಲು ಸಿದ್ಧರಿದ್ದಾರೆ. ಆದ್ದರಿಂದ ತಾರತಮ್ಯ ತೋರದೆ ಸಹಜ ನ್ಯಾಯ ತತ್ವದ ಅಡಿ ಉಭಯ ಪಕ್ಷಗಳ ವಕೀಲರಿಗೆ ಸಮಾನ ಅವಕಾಶ ನೀಡಬೇಕು ಎಂದು ಕೋರಲಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮುಖ್ಯ ನ್ಯಾಯಮೂರ್ತಿ ಜೊತೆ ಚರ್ಚಿಸಿ ಪರಿಹಾರ ದೊರಕಿಸಿಕೊಡಬೇಕು ಎಂದು ಅಮೃತೇಶ್ ಮನವಿ ಮಾಡಿದ್ದಾರೆ.