ಬೆಂಗಳೂರು:ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಸರ್ಕಾರಿ ಜಮೀನು ಅತಿಕ್ರಮಿಸಿ ಖಾಸಗಿ ಕಂಪನಿಗಳು ಸೌರ ವಿದ್ಯುತ್ ಯೋಜನೆ ಕೈಗೊಂಡಿವೆ ಎಂಬ ಆರೋಪಕ್ಕೆ ಸಂಬಂಧ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಲು ಹೈಕೋರ್ಟ್ ಜಿಲ್ಲಾಧಿಕಾರಿಗೆ ನಿರ್ದೇಶಿಸಿದೆ.
ಹಿರಿಯೂರಿನ ಬೇತೂರು ಗ್ರಾಮದ ಬಿ.ಕೆ. ನಟರಾಜ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ- ಪ್ರತಿವಾದ ಆಲಿಸಿದ ಪೀಠ, ಅರ್ಜಿದಾರರು ಆರೋಪಿಸಿರುವ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಕಂದಾಯ ಅಧಿಕಾರಿಗಳ ತಂಡ ರಚಿಸಬೇಕು. ಈ ತಂಡ ಸ್ಥಳ ಪರಿಶೀಲನೆ ನಡೆಸಿ, ಸೌರ ವಿದ್ಯುತ್ ಯೋಜನೆಗೆ ಬಳಸುತ್ತಿರುವ ಜಮೀನು ಸರ್ಕಾರದ್ದೇ ಅಥವಾ ಖಾಸಗಿಯವರದ್ದೇ ಎಂಬುದನ್ನು ಪರಿಶೀಲಿಸಿ ಮಾ.23ರ ಒಳಗೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ಮಾರ್ಚ್ 29ಕ್ಕೆ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಪರಿಸರ ಕಾಯ್ದೆ ಹಿಂದೆ ವಿದೇಶಿ ಕೈವಾಡ ಆರೋಪ: 5 ಲಕ್ಷ ದಂಡ ಪಾವತಿಸಲು ಒಪ್ಪಿದ ಹೆದ್ದಾರಿ ಪ್ರಾಧಿಕಾರ
ಅರ್ಜಿದಾರರ ಪರ ವಕೀಲ ಕೆ.ಪಿ. ಜಯಸಿಂಹ ವಾದ ಮಂಡಸಿ, ಹಿರಿಯ ತಾಲೂಕಿನ ಧರ್ಮಪುರಿ ಹೋಬಳಿಯ ಬುರಡೆಗುಂಟೆ, ಕಣಜನಹಳ್ಳಿ ಮತ್ತು ಸುಗೂರು ಗ್ರಾಮಗಳ ವಿವಿಧ ಸರ್ವೇ ನಂಬರ್‌ನಲ್ಲಿ 360 ಎಕರೆ ಸರ್ಕಾರಿ ಜಮೀನು ಇದೆ. ಅದರಲ್ಲಿ ಸಾಕಷ್ಟು ಜಮೀನನ್ನು ಭೋಮುರ್ಖ ಸೋಲಾರ್ ಕಾರ್ಪೋರೇಷನ್ ಲಿಮಿಟೆಡ್, ಸನ್ ಮಾರ್ಕ್ ಎಜರ್ನಿ ಸಿಸ್ಟಮ್ ಪ್ರಾಜೆಕ್ಟ್ ಲಿ. ಸೇರಿದಂತೆ ಕೆಲ ಕಂಪನಿಗಳು ಸೌರ ವಿದ್ಯುತ್ ಯೋಜನೆ ಕೈಗೊಂಡಿದೆ. ಹೀಗಾಗಿ, ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ನಿರ್ದೇಶಿಸಬೇಕೆಂದು ಎಂದು ಕೋರಿದರು.