ಬೆಂಗಳೂರು: ಮೈಸೂರು ನಗರದ ಕುರುಬರಹಳ್ಳಿಯಲ್ಲಿ ಸರ್ಕಾರದ 139 ಎಕರೆ ಭೂಮಿಯನ್ನು 30 ವರ್ಷಗಳವರೆಗೆ ಅವೈಜ್ಞಾನಿಕ ಆಧಾರದಲ್ಲಿ ಮೈಸೂರಿನ ರೇಸ್ ಕ್ಲಬ್ ಲಿಮಿಟೆಡ್‌ಗೆ ಗುತ್ತಿಗೆ ನೀಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸರ್ಕಾರದ ಗುತ್ತಿಗೆ ಆದೇಶ ರದ್ದು ಕೋರಿ ವಕೀಲ ಎಸ್.ಉಮಾಪತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ ಹಾಗೂ ಮೈಸೂರು ರೇಸ್ ಕ್ಲಬ್ಗೆ ನೋಟಿಸ್ ಜಾರಿ ಮಾಡಿತು.
ಅಲ್ಲದೆ ಯಾವ ನಿಯಮಗಳ ಆಧಾರದಲ್ಲಿ ಭೂಮಿಯನ್ನು 30 ವರ್ಷ ಗುತ್ತಿಗೆ ನೀಡಲಾಗಿದೆ. ಗುತ್ತಿಗೆಗೆ ಪ್ರತಿಫಲವಾಗಿ ಕ್ಲಬ್ ವಾರ್ಷಿಕವಾಗಿ ಗಳಿಸುವ ಆದಾಯದ ಶೇ. 2ರಷ್ಟನ್ನು ಬಾಡಿಗೆಯಾಗಿ ನಿಗದಿಪಡಿಸಲಾಗಿದೆ. ಅದರಂತೆ ಕ್ಲಬ್ ಒಂದು ವೇಳೆ ಆದಾಯ ಗಳಿಸದಿದ್ದರೆ ಬಾಡಿಗೆ ನೀಡುವಂತಿಲ್ಲವೇ ಎಂದು ಪ್ರಶ್ನಿಸಿತು. ಈ ಎಲ್ಲಾ ವಿಚಾರವಾಗಿ ಸ್ವಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ ಪೀಠ, ಜಮೀನಿನ ಉಪ ಗುತ್ತಿಗೆ ಪಡೆದಿರುವ ಜಯ ಚಾಮರಾಜೇಂದ್ರ ಗಾಲ್ಫ್ ಕ್ಲಬ್ಅನ್ನು ಪ್ರತಿವಾದಿಯಾಗಿ ಸೇರಿಸುವಂತೆ ಅರ್ಜಿದಾರರಿಗೆ ಸೂಚಿಸಿ, ವಿಚಾರಣೆ ಮುಂದೂಡಿತು.