ಸರ್ಕಾರಿ ಭೂಮಿಯಲ್ಲಿ ಬಾರ್, ಕಾರ್ಖಾನೆಯವರಿಂದ ಒತ್ತುವರಿ.. ಪ್ರತಿಭಟನಾಕಾರರ ಆರೋಪ ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಜಮೀನುಗಳನ್ನು ಭೂ ಮಾಫಿಯಾ ನುಂಗಿ ನೀರು ಕುಡಿಯುತ್ತಿರುವ ಆರೋಪ ರಾಜಧಾನಿಯಲ್ಲೇ ಸದ್ದು ಮಾಡುತ್ತಿದೆ. ಅದರಲ್ಲೂ ಹೆಬ್ಬಗೋಡಿ ಜಿಗಣಿ ನಡುವಿನ ತಿರುಪಾಳ್ಯ-ವಾಜಪೇಯಿ ವೃತ್ತಕ್ಕೆ ಹೊಂದಿಕೊಂಡಿರುವ ತಿರುಪಾಳ್ಯ ಸರ್ವೆ ನಂ 9ರ 6 ಎಕರೆ 01 ಗುಂಟೆ ಜಮೀನಿಗೆ ಬೇಲಿ ಹಾಕಲು ಮುಂದಾಗಿದ್ದಾರೆ ಎನ್ನಲಾದ ಸರ್ವೇ ನಂ 8 ರ ನಾಗರಾಜ ರೆಡ್ಡಿ ವಿರುದ್ಧ ಇಲ್ಲಿನ ಮಹಿಳಾ ಹೋರಾಟಗಾರರು ಐದಾರು ದಿನಗಳಿಂದ ಸ್ಥಳದಲ್ಲಿ ಧರಣಿ ಕುಳಿತಿದ್ದಾರೆ.
ಈವರೆಗೆ ದಂಡಾಧಿಕಾರಿಗಳಾಗಲಿ ಹೆಬ್ಬಗೋಡಿ ನಗರಸಭೆ ಅಧಿಕಾರಿಗಳಾಗಲಿ ಇತ್ತ ಸುಳಿಯದೇ ಇರುವುದರಿಂದ ಸರ್ಕಾರವೇ ಭೂ ಮಾಫಿಯಾದವರೊಂದಿಗೆ ಕೈ ಜೋಡಿಸಿದೆ ಎಂಬ ಆರೋಪವನ್ನು ತಿರುಪಾಳ್ಯದ ನಿವಾಸಿ ರೇಣುಕಾ ಎಂಬುವರು ಮಾಡುತ್ತಿದ್ದಾರೆ.
ಇಲ್ಲಿನ ಭೂಮಿಗೆ ಚಿನ್ನದ ಬೆಲೆ.. ಹೆಬ್ಬಗೋಡಿ ಭಾಗದ ಭೂಮಿಗೆ ಚಿನ್ನದ ಬೆಲೆ ಬಂದಿದ್ದೇ ತಡ, ಎಲ್ಲಿ ನೋಡಿದರೂ ಸರ್ಕಾರಿ ಭೂಮಿಯಲ್ಲಿ ಬಾರ್ಗಳ ದರ್ಬಾರ್, ಇಟ್ಟಿಗೆ ಕಾರ್ಖಾನೆಗಳು ತಲೆ ಎತ್ತಿವೆ. ಭೂಮಿಯನ್ನು ಬಲಾಢ್ಯರಿಗೆ ಬಾಡಿಗೆ ನೀಡಲಾಗ್ತಿದೆ. ವಾಣಿಜ್ಯ ಮಳಿಗೆಗಳಷ್ಟೇ ಅಲ್ಲದೆ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂದು ತಿರುಪಾಳ್ಯದ ಮಂಜುಳಾ ದೂರಿದ್ದಾರೆ.
ವಾರದಿಂದ ಸರ್ಕಾರಿ ಜಮೀನಿಗೆ ಕಬ್ಬಿಣ ಕಂಬಿಗಳ ಆವರಣ ಹಾಕಿ, ಜೆಸಿಬಿ ಕೆಲಸ ಮಾಡುವುದನ್ನು ಗಮನಿಸಿದ ಮಹಿಳೆಯರು ಹೆಬ್ಬಗೋಡಿ ನಗರಸಭೆ ಏನೋ ಮಾಡುತ್ತಿದೆ ಎಂದು ಸುಮ್ಮನಾಗಿದ್ದಾರೆ. ಆದರೆ ಪಕ್ಕದ ಅನಂ 8ರ ಜಮೀನುದಾರರೇ ಇಷ್ಟ ಬಂದ ಹಾಗೆ ಆವರಣ ಹಾಕಿಕೊಳ್ಳುತ್ತಿದ್ದದ್ದು ಕಂಡು ಮಹಿಳೆಯರು ದರಣಿ ಕುಳಿತಿದ್ದಾರೆ.
ಈ ಕುರಿತು ತಹಶೀಲ್ದಾರ್ ಶಿವಪ್ಪ ಲಮ್ಹಾಣಿ ಅವರು ಮಾತನಾಡಿ, ಇರುವ ಒಬ್ಬರೇ ಒಬ್ಬರು ಸರ್ವೆಯರ್ಗೆ ಇಂದು ಸರ್ಕಾರಿ ಭೂಮಿ ಅಳತೆ ಮಾಡಿ ಹದ್ದುಬಸ್ತು ಗುರುತಿಸಲು ತಿಳಿಸಲಾಗಿದೆ. ಸರ್ಕಾರಿ ಜಮೀನಿನಲ್ಲಿ ಒಎಸ್ ಸಂಖ್ಯೆಯ ಸೂಚನಾ ಫಲಕ ಹಾಕುವುದು ಅಕ್ಷಮ್ಯ ಅಪರಾಧ. ಅಂತಹವುಗಳನ್ನು ತೆರವುಗೊಳಿಸಲಾಗುವುದು. ಅಷ್ಟೇ ಅಲ್ಲದೆ ಬಾರ್, ಸಿಮೆಂಟ್ ಇಟ್ಟಿಗೆ ಕಾರ್ಖಾನೆಗಳಲ್ಲದೆ ವಾಣಿಜ್ಯ ಮಳಿಗೆಗಳು ಇಲ್ಲಿ ತಲೆ ಎದ್ದಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಸರ್ವೆ ಕಾರ್ಯ ಮುಗಿದ ನಂತರ ಸರ್ಕಾರದ ನಿಯಮಗಳಡಿ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಜಮೀನಿನ ಕತೆ: ತಿರುಪಾಳ್ಯ ಸ.ನಂ 9ರ 6 ಎಕರೆ 01 ಗುಂಟೆ ಜಮೀನಿನಲ್ಲಿ 2008ರಲ್ಲಿ ಬೆಂಗಳೂರು ನಗರ ಜಿಲ್ಲಾ ವಿಶೇಷ ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಗೆ 3 ಎಕರೆ, 20 ಗುಂಟೆ ಸ್ಮಶಾನಕ್ಕೆ, 04 ಗುಂಟೆ ಅಂಬೇಡ್ಕರ್ ಪುತ್ಥಳಿಗೆ, 10 ಗುಂಟೆ ಸಮಾಜ ಕಲ್ಯಾಣ ವಸತಿ ಶಾಲೆಗೆ, 10 ಗುಂಟೆ ಅಂಬೇಡ್ಕರ್ ಭವನಕ್ಕೆ ಮಂಜೂರಾಗಿದೆ. ಒಟ್ಟು 4.04 ಎಕರೆ ಮಂಜೂರಾಗಿಯಾಗಿದೆ. ಉಳಿದ 1 ಎಕರೆ 37 ಗುಂಟೆಯಲ್ಲಿ ಈಗಾಗಲೇ 20 ಗುಂಟೆ ಸರ್ಕಾರಿ ರಸ್ತೆಯಾಗಿ ಮಾರ್ಪಟ್ಟಿದೆ. ಉಳಿಕೆ 01 ಎಕರೆ 17 ಗುಂಟೆ ಜಮೀನನ್ನೂ ಗುರುತಿಸುವ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:ಕಲ್ಯಾಣ ಮಂಟಪ ದುರ್ಬಳಕೆ ಆರೋಪ: ಪ್ರಿಯಾಂಕ್, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರಾಠೋಡ್ ದೂರು