ಬೆಂಗಳೂರು:ಸಿರಿಧಾನ್ಯ ಬಳಕೆ ಉತ್ತೇಜಿಸಲು ಎಲ್ಲ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು, ಪಾನೀಯಗಳನ್ನು ಬಳಸುವಂತೆ ಸರ್ಕಾರ ಆದೇಶಿಸಿದೆ. ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023ನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಕಳಸದ ಅವರು ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದ ಎಲ್ಲಾ ಇಲಾಖೆಗಳು ಹಾಗೂ ಎಲ್ಲಾ ಅಧೀನ ಕಛೇರಿಗಳಲ್ಲಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖಾ ವತಿಯಿಂದ ಎಲ್ಲಾ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತ್‌ಗಳಲ್ಲಿ ಆಯೋಜಿಸಲಾಗುವ ಎಲ್ಲಾ ಸಭೆ, ಸಮಾರಂಭಗಳಲ್ಲಿ ಸಿರಿಧಾನ್ಯ ಆಧಾರಿತ ತಿಂಡಿ ತಿನಿಸು/ಪಾನೀಯಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ.
ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಹಾಗೂ ಸಿರಿಧಾನ್ಯಗಳಿಗೆ ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಸೃಷ್ಟಿಸಲು ಮತ್ತು ಜನರಿಗೆ ಪೌಷ್ಟಿಕಾಂಶದ ಆಹಾರವನ್ನು ಒದಗಿಸಲು ಅಂತಾರಾಷ್ಟ್ರೀಯ ಸಿರಿಧಾನ್ಯಗಳು ವರ್ಷ ಎಂದು ಘೋಷಿಸಲು ವಿಶ್ವಸಂಸ್ಥೆಗೆ ಭಾರತ ಸರ್ಕಾರ 2021ರಲ್ಲಿ ಪುಸ್ತಾಪಿಸಿದ ಮೇರೆಗೆ ವಿಶ್ವಸಂಸ್ಥೆ '2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ' ಎಂದು ಘೋಷಿಸಿದೆ.