ಬಿಬಿಎಂಪಿ ವಾರ್ಡ್ ಮರು ವಿಂಗಡಣೆ: ರಾಜ್ಯ ಸರ್ಕಾರದಿಂದ ಅಂತಿಮ ಆದೇಶ
ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಅಂತಿಮ ಆದೇಶ ಹೊರಬಿದ್ದಿದೆ.
ಬಿಬಿಎಂಪಿ ವಾರ್ಡ್ ಮರು ವಿಂಗಡಣೆ: ರಾಜ್ಯ ಸರ್ಕಾರದಿಂದ ಅಂತಿಮ ಆದೇಶ
By
Published : Jul 15, 2022, 9:11 AM IST
ಬೆಂಗಳೂರು: ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮಾಡಿ ರಾಜ್ಯ ಸರ್ಕಾರ ಅಂತಿಮ ಆದೇಶ ಪ್ರಕಟಿಸಿದೆ. ಮಹಾನಗರ ವ್ಯಾಪ್ತಿಯಲ್ಲಿದ್ದ 198 ವಾರ್ಡ್‌ಗಳನ್ನು ಡಿ ಲಿಮಿಟೇಷನ್ ಮಾಡಿ 243 ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ.
ರಾಜ್ಯ ಸರ್ಕಾರ ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ಧಿ ಮಂಡಳಿ ಹಾಗೂ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ 2021ರ ಜನವರಿಯಲ್ಲಿ ವಾರ್ಡ್‌ಗಳ ಪುನರ್ ವಿಂಗಡಣಾ ಸಮಿತಿ ರಚನೆ ಮಾಡಿ 198 ವಾರ್ಡ್‌ಗಳನ್ನು 243 ವಾರ್ಡ್‌ಗಳಾಗಿ ಮರು ವಿಂಗಡಿಸಿ ವರದಿ ನೀಡುವಂತೆ ಸೂಚಿಸಿತ್ತು. ಸಮಿತಿ ಕಳೆದ ಜೂನ್ 9ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಕರಡು ವರದಿ ಒಪ್ಪಿರುವ ರಾಜ್ಯ ಸರ್ಕಾರ ವಾರ್ಡ್ ಮರು ವಿಂಗಡಣೆ ಸಂಬಂಧಿಸಿದಂತೆ ಜೂನ್ 23ರಂದು ಕರಡು ವರದಿ ಪ್ರಕಟಿಸಿ 15 ದಿನದಲ್ಲಿ ಸಾರ್ವಜನಿಕ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತ್ತು.
ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಆದೇಶ
ನಂತರ ಸಲ್ಲಿಕೆಯಾದ 3,833 ಆಕ್ಷೇಪಣೆಗಳನ್ನು ಪರಿಶೀಲಿಸಲು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿತ್ತು. ಅದರಂತೆ ಅಪರ ಮುಖ್ಯ ಕಾರ್ಯದರ್ಶಿಗಳು ಜುಲೈ 11 ಮತ್ತು 12ರಂದು ಸಭೆ ನಡೆಸಿ ಆಕ್ಷೇಪಣೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ವರದಿಯನ್ನು ಒಪ್ಪಿಕೊಂಡು ರಾಜ್ಯ ಸರ್ಕಾರ, ಕರ್ನಾಟಕ ರಾಜ್ಯ ಪತ್ರದ ಮೂಲಕ ಅಂತಿಮ ಅಧಿಸೂಚನೆ ಹೊರಡಿಸಿದೆ.