ಬೆಂಗಳೂರು:ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ವಿಚಾರ ಇದೀಗ ಮರುಜೀವ ಪಡೆದಿದೆ. ಈ ಸಂಬಂಧ ನೇಮಿಸಲಾಗಿದ್ದ ಸಮಿತಿಯನ್ನು ಪುನರ್ ರಚಿಸಲು ಸರ್ಕಾರ ಆದೇಶ ಹೊರಡಿಸಿದೆ. ಬಿಬಿಎಂಪಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಪುನರ್ ರಚನೆ ಸಂಬಂಧ ಅಧ್ಯಯನ ನಡೆಸಲು ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಬಿಬಿಎಂಪಿ ನಿವೃತ್ತ ಆಯುಕ್ತ ಸಿದ್ದಯ್ಯ, ರವಿಚಂದರ್ ಅವರನ್ನು ಸದಸ್ಯರಾಗಿ ನೇಮಿಸಲಾಗಿದೆ.
ಇದನ್ನೂ ಓದಿ:Mysugar factory : ರಾಜ್ಯ ಸರ್ಕಾರದಿಂದ ಮೈಶುಗರ್ ಕಾರ್ಖಾನೆಗೆ 50ಕೋಟಿ ಬಿಡುಗಡೆ ; ಸಚಿವ ಚೆಲುವರಾಯಸ್ವಾಮಿ
ಈ ಮುಂಚೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸುವುದು ಸೂಕ್ತವೆಂದು ಪರಿಗಣಿಸಲಾಗಿತ್ತು. ವಿಭಜನೆ ಮುನ್ನ ತಜ್ಞರ ಸಮಿತಿಯನ್ನು ನೇಮಿಸಲು ನಿರ್ಧರಿಸಲಾಗಿತ್ತು. ತಜ್ಞರ ಸಮಿತಿಯಿಂದ ನಿಗದಿತ ಕಾಲಮಿತಿಯೊಳಗೆ ವರದಿಯನ್ನು ಪಡೆದು, ವರದಿ ಆಧಾರದ ಮೇಲೆ ಸಾರ್ವಜನಿಕ ಸಲಹೆಯನ್ನು ಪಡೆದು ಸೂಕ್ತ ನಿರ್ಧಾರವನ್ನು ತೆಗೆದುಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡುವ ಬಗ್ಗೆ ಅಧ್ಯಯನ ನಡೆಸಿ ವರದಿಯನ್ನು ಸಲ್ಲಿಸಲು ಸರ್ಕಾರ ತೀರ್ಮಾನಿಸಿತ್ತು. ಅದರಂತೆ ಬಿ.ಎಸ್. ಪಾಟೀಲ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನು 2014ರ ಸೆಪ್ಟೆಂಬರ್ನಲ್ಲೇ ರಚಿಸಲಾಗಿತ್ತು.