ಬೆಂಗಳೂರು:ಪ್ರವಾಹ ಪೀಡಿತ ಪ್ರದೇಶಗಳ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಜಿ ಸಚಿವ ಎಚ್.ಕೆ.ಪಾಟೀಲ್ ಬರೆದ ಪತ್ರಕ್ಕೆ ಸಿಎಂ ಯಡಿಯೂರಪ್ಪ ಪ್ರತಿಯಾಗಿ ಪತ್ರ ಬರೆದು ಜನರ ಸಂಕಷ್ಟಕ್ಕೆ ಸ್ಪಂದಿಸುವ ಭರವಸೆ ಕೊಟ್ಟಿದ್ದಾರೆ.
ಪ್ರವಾಹ ಪೀಡಿತ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಸನ್ನದ್ಧ: ಪಾಟೀಲ್ ಪತ್ರಕ್ಕೆ ಸಿಎಂ ಉತ್ತರ
ಪ್ರವಾಹ ಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮಾಜಿ ಸಚಿವ ಎಚ್.ಕೆ ಪಾಟೀಲ್ ಬರೆದಿದ್ದ ಪತ್ರಕ್ಕೆ ಸಿಎಂ ಯಡಿಯೂರಪ್ಪ ಉತ್ತರಿಸಿದ್ದಾರೆ.
ಹೆಚ್ ಕೆ ಪಾಟೀಲ್ ಪತ್ರಕ್ಕೆ ಉತ್ತರಿಸಿರುವ ಸಿಎಂ ಬಿಎಸ್ವೈ, ಕೃಷ್ಣಾ ಕೊಳ್ಳಪ್ರದೇಶದಲ್ಲಿನ ಪ್ರವಾಹದಿಂದ ಉಂಟಾಗಿರುವ ಸಂಕಷ್ಟದ ಬಗ್ಗೆ ಬೆಳಕು ಚೆಲ್ಲಿದ್ದಕ್ಕೆ ಧನ್ಯವಾದಗಳು. ಆ ಭಾಗದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಸನ್ನದ್ಧವಾಗಿದೆ ಎಂದು ತಿಳಿಸಿದ್ದಾರೆ. ಜನ-ಜಾನುವಾರುಗಳ ರಕ್ಷಣೆ, ಆಸ್ತಿಪಾಸ್ತಿ ಹಾನಿ ಹಿನ್ನೆಲೆ ಪರಿಹಾರ ಕಲ್ಪಿಸಲು ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು ಹಾಗೂ ಯಾದಗಿರಿ ಜಿಲ್ಲಾಡಳಿತವನ್ನು ಸಜ್ಜುಗೊಳಿಸಲಾಗಿದೆ. ಭಾನುವಾರ ರಜಾ ದಿನವಾದರೂ ಪ್ರವಾಹ ಪೀಡಿತ ಐದು ಜಿಲ್ಲೆಗಳ ಡಿಸಿಗಳ ಜತೆ ತುರ್ತು ವಿಡಿಯೋ ಕಾನ್ಫರೆನ್ಸ್ ಮಾಡಿ, ಸಲಹೆ ಸೂಚನೆಗಳನ್ನು ನೀಡಿದ್ದೇನೆ ಎಂದು ತಿಳಿಸಿದ್ರು.
ನಾಳೆ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದೇನೆ. ದೆಹಲಿ ಭೇಟಿ ವೇಳೆ ಕೇಂದ್ರ ಸಚಿವರನ್ನು ಭೇಟಿಯಾಗಿ ನೆರವು ಕೋರಲಿದ್ದೇನೆ. ರಾಜ್ಯದ ಸಂಸದರ ಜತೆ ಸಭೆ ನಡೆಸಿ ಸಂಕಷ್ಟ ಪರಿಸ್ಥಿತಿಯಲ್ಲಿ ಕೇಂದ್ರದ ಸಹಾಯ ಪಡೆಯಲು ಸಹಕರಿಸುವಂತೆ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಮಾಜಿ ಸಚಿವ ಎಚ್.ಕೆ.ಪಾಟೀಲ್ ಗೆ ಸಿಎಂ ಭರವಸೆ ನೀಡಿದ್ದಾರೆ.