ಕರ್ನಾಟಕ

karnataka

ತಿಗಳರ ಪೇಟೆ ಧರ್ಮರಾಯಸ್ವಾಮಿ ದೇವಾಲಯ ಆಸ್ತಿ ರಕ್ಷಣೆಗೆ ಸರ್ಕಾರ ಬದ್ಧ: ಸೋಮಣ್ಣ

ತಿಗಳರ ಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆಸ್ತಿ ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ದೇವಾಲಯದ ಜಾಗ ಒತ್ತುವರಿ ಮಾಡಿದವರು ಯಾರು ಉದ್ಧಾರ ಆಗಿಲ್ಲ. ದೇವಾಲಯದ 15 ಎಕರೆ 12 ಗುಂಟೆ ಜಾಗ ಇದೆ. ಇದರಲ್ಲಿ 6 ಎಕರೆ ಜಾಗ ಒತ್ತುವರಿ ಆಗಿದೆ. ಒತ್ತುವರಿ ಆಗಿರುವ ಜಾಗವನ್ನು ತೆರವು ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ವಸತಿ ಸಚಿವ ವಿ‌ ಸೋಮಣ್ಣ ಭರವಸೆ ನೀಡಿದ್ದಾರೆ.

By

Published : Mar 24, 2022, 10:44 AM IST

Published : Mar 24, 2022, 10:44 AM IST

ಸೋಮಣ್ಣ
ಸೋಮಣ್ಣ

ಬೆಂಗಳೂರು: ತಿಗಳರ ಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯಕ್ಕೆ ಸೇರಿದ ಜಮೀನು ಒತ್ತುವರಿ ಮಾಡಿಕೊಂಡವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ, ಜಮೀನ ಸ್ವಾಧೀನ ಪಡಿಸಿಕೊಂಡು ಸ್ವತ್ತು ರಕ್ಷಿಸಲು ಕಾಂಪೌಂಡ್ ನಿರ್ಮಿಸಲಾಗುತ್ತದೆ. ದೇವಾಲಯದ ಆಸ್ತಿ ಉಳಿಸಲು ನಮ್ಮ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ವಸತಿ ಸಚಿವ ವಿ‌ ಸೋಮಣ್ಣ ಭರವಸೆ ನೀಡಿದರು.

ಬಿಜೆಪಿ ಸದಸ್ಯ ರವಿಕುಮಾರ್ ಹಾಗೂ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಕೇಳಿದ ಪ್ರಶ್ನೆಗೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪರವಾಗಿ ಉತ್ತರಿಸಿದ ಸಚಿವ ವಿ.ಸೋಮಣ್ಣ, ದೇವಾಲಯ ಆಸ್ತಿ ಉಳಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಧರ್ಮರಾಯಸ್ವಾಮಿ ದೇವಾಲಯದ ಜಾಗ ಒತ್ತುವರಿ ಮಾಡಿದವರು ಯಾರು ಉದ್ಧಾರ ಆಗಿಲ್ಲ. ಬಿಬಿಎಂಪಿ ಅದಕ್ಕೆ ಕುಂಟುತ್ತಾ ಸಾಗಿದೆ ಎಂದು ಪಾಲಿಕೆಯನ್ನೇ ಉದಾಹರಣೆ ಕೊಟ್ಟ ಸಚಿವರು, ಹಲಸೂರಿನಲ್ಲಿ ಧರ್ಮರಾಯಸ್ವಾಮಿ ದೇವಾಲಯದ 15 ಎಕರೆ 12 ಗುಂಟೆ ಜಾಗ ಇದೆ.

ಇದರಲ್ಲಿ 6 ಎಕರೆ ಜಾಗ ಒತ್ತುವರಿ ಆಗಿದೆ. 8 ಎಕರೆ ಖಾಲಿ ಜಾಗ ಹಾಗೆಯೇ ಇದೆ.ಒಟ್ಟಾರೆ 229 ಜನ ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿ ಆಗಿರುವ ಜಾಗವನ್ನು ತೆರವು ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ, ಏಷ್ಟೇ ಪ್ರಬಲ ವ್ಯಕ್ತಿ ಇದ್ದರೂ ಕ್ರಮ ಕೈಗೊಳ್ಳುವುದು ಖಚಿತ ಎಂದರು. ಒತ್ತುವರಿ ಪ್ರಶ್ನೆ ಮಾಡಿದ್ದಕ್ಕೆ ಸಚಿವರು ನಮ್ಮ ಜೇಬಿನಲ್ಲಿದ್ದಾರೆ ಎನ್ನುವ ಹೇಳಿಕೆಯನ್ನು ಎಸಿ ನೀಡಿದ್ದಾರೆ ಅಂತಾ ಸದಸ್ಯ ರಮೇಶ್ ಹೇಳಿದ್ದಾರೆ. ‌ಅಧಿಕಾರಿಗಳ ಇಂತಹ ವರ್ತನೆ ಸಹಿಸಲು ಸಾಧ್ಯವಿಲ್ಲ. ಎಸಿ ವಿರುದ್ಧ ಎಫ್ಐಆರ್ ಹಾಕಿಸುತ್ತೇವೆ. ಈಗ ಇಂತಹ ಮಾತುಗಳೆಲ್ಲಾ ನಡೆಯಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನೀಲಸಂದ್ರ ಗ್ರಾಮದ ಸರ್ವೇ ನಂಬರ್ 79 ರ 15.12 ಎಕರೆ ಜಮೀನನ್ನು ಇಲಾಖೆ ವಶಕ್ಕೆ ಪಡೆಯಲಾಗಿದೆ. 1.20 ಎಕರೆ ಜಮೀನಿನಲ್ಲಿ ಮನೆಗಳ ನಿರ್ಮಾಣ ಆಗಿವೆ. ಆ ಬಗ್ಗೆಯೂ ಗಮನ ವಹಿಸಲಾಗಿದೆ.‌ ಸದ್ಯಕ್ಕೆ ಇಲ್ಲಿನ ಜಮೀನು ಕಾಯಲು 24 ಗಂಟೆ ಸೆಕ್ಯುರಿಟಿ ಹಾಕಲಾಗಿದೆ. ಮೂರು ಪಾಳಿಗೆ ಒಬ್ಬ ಗನ್ ಮ್ಯಾನ್ ಒಳಗೊಂಡ ಮೂವರು ಸಿಬ್ಬಂದಿಯನ್ನ ಸ್ಥಳದಲ್ಲಿ ನಿಯೋಜಿಸಲಾಗಿದೆ. ದೇವಾಲಯದ ಸ್ವತ್ತು ರಕ್ಷಣೆಗಾಗಿ ಮೂರು ವರ್ಷದಲ್ಲಿ 32,03,683 ರೂ. ವಿನಿಯೋಗಿಸಲಾಗಿದೆ ಎಂದರು.

ಸ್ವತ್ತಿನ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಲು ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ. ಒಟ್ಟಿನಲ್ಲಿ ದೇವಾಲಯ ಜಮೀನು ಉಳಿಯಬೇಕು. ಇದಕ್ಕೆ ನಮ್ಮ ಸರ್ಕಾರ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ಸ್ಕೂಟಿಯಲ್ಲಿ ಬರುತ್ತಿದ್ದಾಗಲೇ ಟ್ರಾನ್ಸ್​ಫಾರ್ಮರ್​ ಸ್ಫೋಟ: ಚಿಕಿತ್ಸೆ ಫಲಿಸದೇ ಅಪ್ಪ, ಮಗಳು ಸಾವು

ABOUT THE AUTHOR

...view details