ಕರ್ನಾಟಕ

karnataka

ETV Bharat / state

ಗೋ ಹತ್ಯೆ ನಿಷೇಧ ಕಾಯ್ದೆ ತರುವಲ್ಲಿ ಆಸಕ್ತಿ; ಆದರೆ ಸರ್ಕಾರಿ ಗೋ ಶಾಲೆ ಸ್ಥಾಪಿಸುವಲ್ಲಿ ಮಾತ್ರ ನಿರಾಸಕ್ತಿ?

ಸರ್ಕಾರ ಪ್ರತಿ ಜಿಲ್ಲೆಗೆ 50 ಲಕ್ಷ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ 24 ಲಕ್ಷ ರೂ. ಪ್ರತಿ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಇನ್ನೂ 12 ಲಕ್ಷ ರೂ. ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ.

goshala
ಗೋಶಾಲೆ

By

Published : Nov 10, 2021, 3:17 AM IST

ಬೆಂಗಳೂರು:ರಾಜ್ಯದಲ್ಲಿ ಗೋ ಹತ್ಯೆ ನಿಯಂತ್ರಣ ಕಾಯ್ದೆ ಈಗಾಗಲೇ ಜಾರಿಯಾಗಿದೆ. ಕಾಯ್ದೆ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು.‌ ಕಾಯ್ದೆ ಜಾರಿಯಾಗಿ ಒಂಬತ್ತು ತಿಂಗಳು ದಾಟಿದ್ದರೂ, ಇನ್ನೂ ಜಿಲ್ಲೆಗಳಲ್ಲಿ ಸರ್ಕಾರಿ ಗೋ ಶಾಲೆಗಳನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ.

ಬಿಜೆಪಿ ಸರ್ಕಾರ ಗೋಗಳ ಬಗ್ಗೆ ವಿಶೇಷ ಕಾಳಜಿಯನ್ನೇನು ಹೊಂದಿದೆ. ಅದಕ್ಕಾಗಿ ಗೋ ಹತ್ಯೆ ನಿಷೇಧ‌ ಕಾಯ್ದೆಯನ್ನೂ ಜಾರಿಗೆ ತಂದಿದೆ. ಜೊತೆಗೆ ಬಹುತೇಕ ಕಾರ್ಯಕ್ರಮಗಳಲ್ಲಿ ಗೋ ಪೂಜೆ ಮಾಡುವ ಮೂಲಕ ಬಿಜೆಪಿ ಗೋವಿನ ಪರ ತಮ್ಮ ಗೌರವವನ್ನು ತೋರ್ಪಡಿಸುತ್ತಾ ಇರುತ್ತೆ. ಆದರೆ, ಕಾಯ್ದೆ ಬಂದು ವರ್ಷ ಆಗುತ್ತಾ ಬಂದರೂ ಗೋಗಳ ರಕ್ಷಣೆಗಾಗಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸುವಲ್ಲಿ ಬಿಜೆಪಿ ಸರ್ಕಾರ ಹಿಂದೆ ಬಿದ್ದಿದೆ. ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸುವಲ್ಲಿ ಸರ್ಕಾರ ಯಾಕೋ ಆಸಕ್ತಿ ತೋರುತ್ತಿಲ್ಲ. ಪ್ರತಿ ಜಿಲ್ಲೆಗಳಲ್ಲಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸುವುದಾಗಿ ಘೋಷಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಗೋಶಾಲೆ ನಿರ್ಮಾಣಕ್ಕೆ ಸರ್ಕಾರ ನಿರಾಸಕ್ತಿ

ಇನ್ನೂ ಸ್ಥಾಪನೆಯಾಗದ ಸರ್ಕಾರಿ ಗೋ ಶಾಲೆಗಳು:

ಗೋ ಹತ್ಯೆ ನಿಷೇಧ ಕಾಯ್ದೆಯನ್ನೇನೋ ಬಿಜೆಪಿ ಸರ್ಕಾರ ಅತಿ ಉತ್ಸಾಹದಿಂದಲೇ ಜಾರಿಗೆ ತಂದಿತು. ಆದರೆ, ರಕ್ಷಿಸಿದ ಹಸುಗಳ ಆಶ್ರಯಕ್ಕಾಗಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸುವಲ್ಲಿ ಆಸಕ್ತಿಯನ್ನು ಕಳೆದುಕೊಂಡಂತೆ ಗೋಚರವಾಗುತ್ತಿದೆ. ಕಾಯ್ದೆಯಂತೆ ಪ್ರತಿ ಜಿಲ್ಲೆಗಳಲ್ಲಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ ಈವರೆಗೆ ಯಾವುದೇ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ರಾಜ್ಯದ ಹಲವೆಡೆ ಕಸಾಯಿಖಾನೆಗೆ ಒಯ್ಯುವ ದನ ಕರುಗಳನ್ನು ರಕ್ಷಿಸಲಾಗುತ್ತಿದೆ. ಆದರೆ, ವಿಪರ್ಯಾಸವೆಂದರೆ ರಕ್ಷಿಸಿದ ಹಸು ಕರುಗಳನ್ನು ಎಲ್ಲಿಗೆ ಕಳುಹಿಸುವುದು ಎಂಬುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಖಾಸಗಿ ಗೋ ಶಾಲೆಗಳಿಗೆ ರಕ್ಷಿಸಿದ ಹಸುಗಳನ್ನು ಕಳುಹಿಸಲಾಗುತ್ತಿದೆ. ಆದರೆ ಬಹುತೇಕ ಖಾಸಗಿ ಗೋ ಶಾಲೆಗಳಲ್ಲಿ ಜಾಗ ವಿಲ್ಲದೇ ಹಸುಗಳಿಗೆ ಆಶ್ರಯ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ.

ರೈತರು ಗಂಡು ಕರು, ದನಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುವ ಪರಿಸ್ಥಿತಿ ಬಹುತೇಕ ಜಿಲ್ಲೆಗಳಲ್ಲಿ ಎದುರಾಗಿದೆ. ಇತ್ತ ಖಾಸಗಿ ಗೋ ಶಾಲೆಗಳಲ್ಲಿ ಹಸುಗಳಿಂದ ತುಂಬಿದ್ದು, ಸ್ಥಳಾವಕಾಶದ ಜೊತೆಗೆ ಅನುದಾನದ ಕೊರತೆ ಎದುರಿಸುತ್ತಿದ್ದು, ಭಾರೀ ಹೊರೆ ಬಿದ್ದಂತಾಗಿದೆ.

ಖಾಸಗಿ ಗೋ ಶಾಲೆಗಳಿಗೆ ಹಣ ಬಿಡುಗಡೆ ಎಷ್ಟು?:

ಸರ್ಕಾರ ಪ್ರತಿ ಜಿಲ್ಲೆಗೆ 50 ಲಕ್ಷ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ 24 ಲಕ್ಷ ರೂ. ಪ್ರತಿ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ. ಇನ್ನೂ 12 ಲಕ್ಷ ರೂ. ಬಿಡುಗಡೆ ಮಾಡಲು ಸರ್ಕಾರ ಮುಂದಾಗಿದೆ.

ಈಗಾಗಲೇ ರಾಜ್ಯದಲ್ಲಿ ಸುಮಾರು 188 ಖಾಸಗಿ ಗೋಶಾಲೆಗಳು ಕಾರ್ಯನಿರ್ವಹಿಸುತ್ತಿದೆ. ಆ ಪೈಕಿ 133 ಖಾಸಗಿ ಗೋ ಶಾಲೆಗಳಿಗೆ ಒಟ್ಟು 1.85 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ ಎಂದು ಪಶು ಸಂಗೋಪನೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಖಾಸಗಿ ಗೋ ಶಾಲೆಗಳಿಗೆ ರಕ್ಷಿಸಿದ ಹಸುಗಳ ನಿರ್ವಹಣೆಗೆ ಅನುದಾನದ ಕೊರತೆ ಎದುರಾಗಿದೆ. ಅನುದಾನದ ಕೊರತೆಯಿಂದ ಬಹುತೇಕ ಖಾಸಗಿ ಗೋ ಶಾಲೆಗಳಿಗೆ ಹಸುಗಳ ನಿರ್ವಹಣೆಯೇ ದುಸ್ತರವಾಗಿ ಪರಿಣಮಿಸುತ್ತಿದೆ.

ಸರ್ಕಾರದಿಂದ ಪ್ರತಿ ಗೋವಿಗೆ ದಿನಕ್ಕೆ 17.50 ರೂ. ನೀಡಲಾಗುತ್ತಿದೆ. ಆದರೆ, ಗೋ ನಿರ್ವಹಣೆಗೆ ಈ ಮೊತ್ತ ಅತ್ಯಲ್ಪವಾಗಿದ್ದು, ಕನಿಷ್ಠ ನಿತ್ಯ 60-70 ರೂ. ಬೇಕಾಗಿದೆ. ಆದರೆ ಸರ್ಕಾರ ಅನುದಾನ ಹೆಚ್ಚಿಸುತ್ತಿಲ್ಲ ಎಂದು ಖಾಸಗಿ ಗೋ ಶಾಲೆಗಳ ಆರೋಪವಾಗಿದೆ.

ಸರ್ಕಾರಿ ಗೋ ಶಾಲೆಗಳ ಪ್ರಕ್ರಿಯೆ ಹೇಗಿದೆ?:

ಪಶು ಸಂಗೋಪನೆ ಇಲಾಖೆ ನೀಡಿದ ಅಂಕಿಅಂಶದ ಪ್ರಕಾರ ಸರ್ಕಾರಿ ಗೋ ಶಾಲೆಗಳನ್ನು ನಿರ್ಮಿಸಲು 16 ಜಿಲ್ಲೆಗಳಲ್ಲಿ ಸ್ಥಳ ಗುರುತಿಸಲಾಗಿದ್ದು, ಜಮೀನು ಹಂಚಿಕೆ ಮಾಡಲಾಗಿದೆ.

ಬೆಂಗಳೂರು ನಗರದಲ್ಲಿ 25 ಎಕರೆ, ಬೆಂ.ಗ್ರಾಮಾಂತರ 10 ಎಕರೆ, ತುಮಕೂರು 9.20 ಎಕರೆ, ಚಿಕ್ಕಬಳ್ಳಾಪುರ 9.38 ಎಕರೆ, ಹಾಸನ 25 ಎಕರೆ, ಬಾಗಲಕೋಟೆ 9.20 ಎಕರೆ, ಮೈಸೂರು 10 ಎಕರೆ, ಚಿಕ್ಕಮಗಳೂರು 11 ಎಕರೆ, ದ.ಕನ್ನಡ 98.45 ಎಕರೆ, ರಾಯಚೂರು 6 ಎಕರೆ, ಹಾವೇರಿ 25 ಎಕರೆ, ಗದಗ 10 ಎಕರೆ, ಬಳ್ಳಾರಿ 9.88 ಎಕರೆ, ಕೊಪ್ಪಳ 10 ಎಕರೆ, ದಾವಣಗೆರೆ 7 ಎಕರೆ, ಚಾಮರಾಜನಗರ 9 ಎಕರೆ ಜಮೀನು ಗುರುತಿಸಿ ಸರ್ಕಾರಿ ಗೋ ಶಾಲೆ ನಿರ್ಮಾಣಕ್ಕಾಗಿ ಇಲಾಖೆಗೆ ಹಂಚಿಕೆ ಮಾಡಲಾಗಿದೆ.

ಇನ್ನು 14 ಜಿಲ್ಲೆಗಳಲ್ಲಿ ಸರ್ಕಾರಿ ಗೋ ಶಾಲೆ ನಿರ್ಮಾಣಕ್ಕೆ ಜಮೀನು ಗುರುತಿಸುವ ಪ್ರಕ್ರಿಯೆ ಇನ್ನೂ ಸ್ವಾಧೀನ ಹಂತದಲ್ಲೇ ಇದೆ. ಕಂದಾಯ ಇಲಾಖೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ವಿವಿಧ ಹಂತದಲ್ಲೇ ಉಳಿದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪೈಕಿ ರಾಮನಗರ, ಬೀದರ್, ಶಿವಮೊಗ್ಗ, ಮಂಡ್ಯ, ಉಡುಪಿ, ಬೆಳಗಾವಿ, ಕೊಡಗು, ಉತ್ತರ ಕನ್ನಡ, ಧಾರವಾಡ, ವಿಜಯಪುರ, ಕಲಬುರ್ಗಿ, ಯಾದಗಿರಿ, ಚಿತ್ರದುರ್ಗ, ಕೋಲಾರದಲ್ಲಿ ಇನ್ನೂ ಸರ್ಕಾರಿ ಗೋ ಶಾಲೆಗಳ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ಇನ್ನೂ ವಿವಿಧ ಹಂತದಲ್ಲಿ ಇದೆ.

ABOUT THE AUTHOR

...view details