ಬೆಂಗಳೂರು:ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಖರೀದಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಇದಕ್ಕೆ ಅಗತ್ಯವಿರುವ ಚಾರ್ಜಿಂಗ್ ಸ್ಟೇಷನ್ಗಳನ್ನು ಕೂಡ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯದಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸಲಾಗುತ್ತಿದ್ದು, ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸುವ ಅವಶ್ಯಕತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಅಗತ್ಯ ಆಧರಿಸಿ ವಿವಿಧಡೆ ಚಾರ್ಜಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲಾಗುತ್ತಿದೆ.
ಭಾರತ ಸರ್ಕಾರದ ಫೇಮ್-2 ಯೋಜನೆಯಡಿ ರಾಜ್ಯಕ್ಕೆ 172 ಹಾಗೂ ಅದರಲ್ಲಿ ಬೆಂಗಳೂರು ನಗರಕ್ಕೆ 152, ಮಂಗಳೂರು ನಗರಕ್ಕೆ 10 ಮತ್ತು ಕಲಬುರಗಿ ನಗರಕ್ಕೆ 10 ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಈ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು, ಎನ್‌ಟಿಪಿಸಿ ಲಿಮಿಟೆಡ್ ಮತ್ತು ರಾಜಸ್ಥಾನ ಎಲೆಕ್ಟ್ರಾನಿಕ್ಸ್ ಹಾಗೂ ಇನ್ಸ್ಟ್ರುಮೆಂಟ್ ಲಿಮಿಟೆಡ್ ಜೊತೆ ಬೆಂಗಳೂರು ವಿದ್ಯುತ್ ಕಂಪನಿಯು ವಿಶೇಷ ಎಂಒಯು ಮಾಡಿಕೊಂಡಿದೆ.
ಇದಲ್ಲದೇ ರಾಜ್ಯ ಹೆದ್ದಾರಿಯ 17 ಬೆಸ್ಕಾಂ ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಎನರ್ಜಿ ಎಫೀಸೈನ್ಸಿ ಸರ್ವೀಸಸ್ ಲಿಮಿಟೆಡ್ (ಇಇಎಸ್ಎಲ್) ಗೆ ಒಪ್ಪಿಗೆ ನೀಡಿದೆ. ಕರ್ನಾಟಕ ಸರ್ಕಾರವು ತನ್ನ 2,021ರ ಬಜೆಟ್ನಲ್ಲಿ ಪಿಪಿಪಿ ಆಧಾರದ ಮೇಲೆ ರಾಜ್ಯದಲ್ಲಿ 1,000 ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಬೆಸ್ಕಾಂ ಸಂಸ್ಥೆಯು ರಾಜ್ಯದ ನೋಡಲ್ ಏಜೆನ್ಸಿಯಾಗಿದ್ದು 1,190 ಚಾರ್ಜಿಂಗ್ ಕೇಂದ್ರಗಳನ್ನು ಸ್ಮಾಪಿಸಲು ಕ್ರಿಯಾ ಯೋಜನೆ ಮತ್ತು ಪ್ರಮಾಣಿತ ಬಿಡ್ಡಿಂಗ್ ದಾಖಲೆಗಳನ್ನು ಸಿದ್ಧಪಡಿಸಿದೆ. ಸದರಿ ಕೇಂದ್ರಗಳನ್ನು ಸ್ಥಾಪಿಸಲು ಸ್ಥಳ ಗುರುತಿಸಲು ಸರ್ಕಾರದ ವತಿಯಿಂದ ಎಲ್ಲ ಇಲಾಖೆಗಳಿಗೆ, ಜಿಲ್ಲಾಧಿಕಾರಿಗಳಿಗೆ ಸೂಚನೆಗಳನ್ನು ಜಾರಿಗೊಳಿಸಿದ್ದು, ಇಲ್ಲಿಯವರೆಗೂ 645 ಸ್ಥಳಗಳನ್ನು ರಾಜ್ಯಾದ್ಯಂತ ಗುರುತಿಸಲಾಗಿದೆ. ಇನ್ನೂ ಒಂದೆರಡು ತಿಂಗಳಲ್ಲಿ ಎಲ್ಲಾ ಸ್ಥಳಗಳಲ್ಲಿಯೂ ಚಾರ್ಜಿಂಗ್ ಸ್ಟೇಷನ್ ನಿರ್ಮಾಣಗೊಳ್ಳುವ ಭರವಸೆ ನೀಡಲಾಗಿದೆ.
ಬೆಂಗಳೂರು ವಿದ್ಯುತ್ ಕಂಪನಿ ವತಿಯಿಂದ 10 ಚಾರ್ಜಿಂಗ್ ಪಾಯಿಂಟ್ಗಳು ಹಾಗೂ ಸಾರಿಗೆ ಇಲಾಖೆ, ಕರ್ನಾಟಕ ಸರ್ಕಾರದ 4 ಕೋಟಿ ರೂ. ಅನುದಾನದಲ್ಲಿ 126 ಚಾರ್ಜಿಂಗ್ ಪಾಯಿಂಟ್ ಗಳೊಂದಿಗೆ 2018ರಿಂದ ಇಲ್ಲಿಯವರೆಗೆ ಬೆಂಗಳೂರು ನಗರದಲ್ಲಿ ಒಟ್ಟಾರೆಯಾಗಿ 136 ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪಿಸಲಾಗಿದೆ. ರಾಜ್ಯ ಸರ್ಕಾರದ ಆದೇಶ ಪತ್ರದನ್ವಯ, ಬೆಂಗಳೂರು ವಿದ್ಯುತ್ ಕಂಪನಿಯನ್ನು ರಾಜ್ಯದಲ್ಲಿ ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ನೋಡಲ್ ಏಜೆನ್ಸಿಯನ್ನಾಗಿ ನೇಮಿಸಿದೆ.
ವಿಶೇಷ ಉತ್ತೇಜನ:ರಾಜ್ಯದಲ್ಲಿ ಚಾರ್ಜಿಂಗ್ ಸ್ಟೇಷನ್ಗಳಿಗೆ ನೀಡಿರುವ ಅನುಕೂಲಗಳ ಕುರಿತು ಮಾತನಾಡಿರುವ ಇಂಧನ ಸಚಿವ ವಿ. ಸುನಿಲ್ ಕುಮಾರ್, ಪ್ರತಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರಗಳ ಉಪಕರಣಗಳು ಹಾಗೂ ಯಂತ್ರೋಪಕರಣಗಳ ಮೇಲೆ ಶೇ. 25ರಷ್ಟು ಬಂಡವಾಳ ಸಬ್ಸಿಡಿಯನ್ನು 10 ಲಕ್ಷ ರೂ. ಸೀಮಿತಗೊಳಿಸಿ ಮೊದಲ 500 ಕೇಂದ್ರಕ್ಕೆ ನೀಡಲಾಗುವುದು. ಮರುಸ್ಥಾಪಿಸುವ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್ಗಳಿಗೆ ಸರಬರಾಜು ಮಾಡುವ ವಿದ್ಯುತ್ ಶಕ್ತಿಯ ಮೇಲೆ ಹೆಚ್ಚಿನ ದರವನ್ನು ವಿಧಿಸುತ್ತಿಲ್ಲ. ವಿದ್ಯುತ್ ವಾಹನ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಲು ವಿಶೇಷ ಜಕಾತಿ ಎಲ್ಟಿ-6ಸಿ ಅಡಿ ವಿದ್ಯುತ್ ಸರಬರಾಜು ದರ ಪ್ರತಿ ಯೂನಿಟ್ಗೆ 5 ರೂ. ಹಾಗೂ ಮಾಸಿಕ ನಿಗದಿತ ಶುಲ್ಕ 70 ರೂ. ಕೆಡಬ್ಲ್ಯೂ (ಎಲ್.ಟಿ) ಮತ್ತು 200 ರೂ. ಕೆವಿಎ (ಎಚ್.ಟಿ) ರಂತೆ ನಿಗದಿಪಡಿಸಲಾಗಿದೆ ಎಂದು ವಿವರಿಸಿದ್ದಾರೆ.