ಬೆಂಗಳೂರು:ರಾಜ್ಯ ಬಿಜೆಪಿ ಸರ್ಕಾರ ಕಳೆದ 20 ತಿಂಗಳಿಂದ ಕಲ್ಯಾಣ ಕರ್ನಾಟಕವನ್ನು ಕಡೆಗಣಿಸಿತ್ತು. ಈಗ ಕೊರೊನಾ ಕಾಲದಲ್ಲಿ ಘೋರ ಅನ್ಯಾಯವೆಸಗಿ ಈ ಭಾಗವನ್ನು ಅನಾಥವಾಗಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರ ಅಭಿಪ್ರಾಯಪಟ್ಟಿದ್ದಾರೆ.
ಇಡೀ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕೋವಿಡ್ 2ನೇ ಅಲೆ ತೀವ್ರವಾಗಿದ್ದು, ಇಲ್ಲಿ ವೈದ್ಯರುಗಳಿಗೆ ಮತ್ತು ಆರೋಗ್ಯ ಸಿಬ್ಬಂದಿಗೆ ಅಗತ್ಯ ಪ್ರಮಾಣದ ವೈಯಕ್ತಿಕ ಸುರಕ್ಷತಾ ಕಿಟ್ (ಪಿಪಿಪಿ) ಇಲ್ಲ, ರೋಗಿಗಳಿಗೆ ಅಗತ್ಯವಾದ ಔಷಧವೂ ಲಭಿಸುತ್ತಿಲ್ಲ, ಜನರು ರಸ್ತೆಯಲ್ಲಿ ಸಾಯುತ್ತಿದ್ದಾರೆ, ಆಸ್ಪತ್ರೆಗೆ ಬರುವ ದಾರಿಯಲ್ಲೇ ಸಾವಿಗೀಡಾಗುತ್ತಿದ್ದಾರೆ, ಕಲ್ಯಾಣ ಕರ್ನಾಟಕದ ಗೋಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ತೀವ್ರ ನೋವು ವ್ಯಕ್ತಪಡಿಸಿದ್ದಾರೆ.
ಕಲ್ಯಾಣ ಕರ್ನಾಟಕವನ್ನು ಸರ್ಕಾರ ಮೃತ್ಯುಕೂಪ ಮಾಡಲು ಹೊರಟಿದೆ. ಇಲ್ಲಿ ಕೋವಿಡ್ ರೋಗಿಗಳ ಮಾರಣ ಹೋಮವೇ ಆಗುತ್ತಿದೆ. ನಿತ್ಯ ಸಾವಿನ ಸಂಖ್ಯೆ ಅಧಿಕವಾಗುತ್ತಿದೆ. ಈ ಬಗ್ಗೆ ಅಂಕಿ - ಅಂಶ ಬಿಡುಗಡೆಯಲ್ಲೂ ಸರ್ಕಾರ ಸುಳ್ಳು ಮಾಹಿತಿ ನೀಡಿ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಎಲ್ಲ ಸಾವಿನ ಹೊಣೆಯನ್ನು ಸರ್ಕಾರ ಹೊರುತ್ತದೆಯೋ, ಮುಖ್ಯಮಂತ್ರಿ ಹೊರುತ್ತಾರೋ, ಆರೋಗ್ಯ ಸಚಿವರು ಹೊರುತ್ತಾರೋ, ಜಿಲ್ಲಾ ಉಸ್ತುವಾರಿ ಸಚಿವರು ಅಥವಾ ಜಿಲ್ಲಾಧಿಕಾರಿ ಹೊರುತ್ತಾರೋ ಎಂದು ಪ್ರಶ್ನಿಸಿದ್ದಾರೆ.
ಬ್ರಿಮ್ಸ್ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಜೀವರಕ್ಷಣ ಆಕ್ಸಿಜನ್ ಮತ್ತು ರೆಮ್ಡೆಸಿವಿರ್ ಚುಚ್ಚುಮದ್ದು ಸಮರ್ಪಕವಾಗಿ ಪೂರೈಕೆಯಾಗದೇ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೀದರ್ ಜಿಲ್ಲೆಯಲ್ಲಿ ರೆಮ್ಡೆಸಿವಿರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ.
ಬ್ರಿಮ್ಸ್ ನಲ್ಲಿ ಏ.18ರಂದು 200 ರೋಗಿಳಿಗೆ ರೆಮ್ಡೆಸಿವಿರ್ ಕೊಡಬೇಕು ಎಂದು ವೈದ್ಯರೇ ನಿರ್ಧರಿಸಿದರು. ಅಲ್ಲಿ ಒಂದು ಡೋಸ್ ಕೊಟ್ಟವರಿಗೆ ಸಂಜೆ 2ನೇ ಡೋಸ್ ಕೊಡಲು ಔಷಧ ಸ್ಟಾಕ್ ಇರಲಿಲ್ಲ, 2,3,4ನೇ ಡೋಸ್ ಕೊಟ್ಟವರಿಗೆ ಮಾರನೇ ದಿನ ಮತ್ತೊಂದು ಡೋಸ್ ನೀಡಲು ಚುಚ್ಚುಮದ್ದು ಸಿಗುತ್ತಿಲ್ಲ. ಇದರಿಂದ ರೋಗಿಗಳ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಈ ಎಂದು ವೈದ್ಯರೇ ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ. ಇನ್ನು 23ರಂದೂ ಇದೇ ಕೊರತೆ ಸ್ಥಿತಿ ತಲೆದೋರಿತ್ತು. ಇಂದೂ ಪರಿಸ್ಥಿತಿ ಭಿನ್ನವಾಗಿಲ್ಲ. ಆದರೂ ಸರ್ಕಾರ ಕುರುಡಾಗಿ, ಕಿವುಡಾಗಿ, ಸಂವೇದನೆಯನ್ನೇ ಕಳೆದುಕೊಂಡು ಸತ್ತ ಸ್ಥಿತಿಯಲ್ಲಿದೆ, ಜನರನ್ನೂ ಸಾಯಿಸುತ್ತಿದೆ. ಈ ನಿರ್ಲಕ್ಷ್ಯತನದ ಜವಾಬ್ದಾರಿ ಯಾರು ಹೊರುತ್ತಾರೆ ಎಂದು ಕಿಡಿ ಕಾರಿದ್ದಾರೆ.