ಬೆಂಗಳೂರು: ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಜನರಿಗೆ ನಿವೇಶನ ಮತ್ತು ಮನೆಗಳನ್ನು ಹಂಚಿಕೆ ಮಾಡುವ ಜವಾಬ್ದಾರಿಯಿಂದ ಹಿಂದೆ ಸರಿಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇನ್ನು ಮುಂದೆ ಜನರಿಗೆ ನಿವೇಶನ ಹಾಗೂ ಮನೆ ನೀಡಲು ಗೃಹ ಮಂಡಳಿಯ ವತಿಯಿಂದ ಭೂಸ್ವಾಧೀನ ಪ್ರಕ್ರಿಯೆ ನಡೆಸದಿರಲು ತೀರ್ಮಾನಿಸಲಾಗಿದೆ. ಭೂಸ್ವಾಧೀನ ಕಾರ್ಯದಲ್ಲಿ ಉಂಟಾಗುತ್ತಿರುವ ವಿಳಂಬ ಮತ್ತು ಕಿರಿಕಿರಿಯನ್ನು ಭರಿಸಿಕೊಳ್ಳುವುದು ಕಷ್ಟ. ಹೀಗಾಗಿ ಜನರಿಗೆ ನಿವೇಶನ ಹಂಚಿಕೆ ಮಾಡಲು, ಮನೆ ನಿರ್ಮಿಸಿಕೊಡಲು ಸರ್ಕಾರ ತಯಾರಿಲ್ಲ.
ಇದೇ ಕಾರಣಕ್ಕಾಗಿ ಕಳೆದ ಹಲವು ಕಾಲದಿಂದ ಜನರಿಗೆ ಮನೆ,ನಿವೇಶನ ನೀಡುವ ಕೆಲಸವಾಗಿರಲಿಲ್ಲ. ಇಷ್ಟಾದರೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 65 ಯೋಜನೆಗಳನ್ನು ಕೈಗೆತ್ತಿಕೊಂಡಿದ್ದು, ಜನರಿಗೆ ಅಂತಿಮ ಕಂತಿನಲ್ಲಿ ಆರು ಸಾವಿರ ನಿವೇಶನಗಳನ್ನು ಒದಗಿಸಲು ತೀರ್ಮಾನಿಸಿದೆ.
ಹಂಚಿಕೆಗೆ ಸಮಿತಿ ರಚನೆ: ಮೈಸೂರಿನ ಕೆ.ಆರ್.ಎಸ್. ನಿಸರ್ಗ ಬಡಾವಣೆಯಲ್ಲಿ 523 ನಿವೇಶನಗಳನ್ನು ನಿರ್ಮಿಸಲಾಗಿದ್ದು, ಇದೇ ರೀತಿ ಬಳ್ಳಾರಿ, ಹರಿಹರ, ವಿಜಯಪುರ, ಗದಗ, ಹುನಗುಂದ ಸೇರಿದಂತೆ ರಾಜ್ಯದ ವಿವಿಧೆಡೆ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಒಟ್ಟು 6015 ನಿವೇಶನ ಮತ್ತು 20 ಮನೆಗಳನ್ನು ಜನರಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ನಿವೇಶನ ಹಂಚಿಕೆ ಮಾಡಲು ಮುಖ್ಯ ಇಂಜಿನಿಯರ್ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದ್ದು, ಕೆ.ಆರ್.ಎಸ್ ನಿಸರ್ಗ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಿದೆ.
ಲಾಟರಿ ಮೂಲಕ ಆಯ್ಕೆ: ಆಯಾ ಬಡಾವಣೆಯಲ್ಲಿ ನಿವೇಶನಗಳನ್ನು ಕೋರಿ ಬಂದಿರುವ ಅರ್ಜಿಗಳನ್ನು ಸ್ಥಳದಲ್ಲೇ ಲಾಟರಿಯ ಮೂಲಕ ಹಂಚಿಕೆ ಮಾಡಲಿದೆ. ಇದೇ ರೀತಿ ತಾಲೂಕು ಮಟ್ಟದಲ್ಲಿ ರೈತರು ಒದಗಿಸುವ ಭೂಮಿಗೆ ಶೇ. 60:40 ರ ಅನುಪಾತದಲ್ಲಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಅಭಿವೃದ್ಧಿಪಡಿಸಿದ ಭೂಮಿಯಲ್ಲಿ ಶೇ. 60 ರಷ್ಟು ಭೂಮಿಯನ್ನು ಸರ್ಕಾರ ಇಟ್ಟುಕೊಂಡು ಶೇ. 40 ರಷ್ಟು ಭೂಮಿಯನ್ನು ರೈತರಿಗೆ ಬಿಟ್ಟು ಕೊಡಲಿದೆ. ಕೇವಲ ಭೂ ಒಡೆಯರಾದ ರೈತರ ಜತೆ ಮಾತ್ರ ಸಹಭಾಗಿತ್ವ ಮಾಡಿಕೊಳ್ಳಲಾಗುವುದೇ ವಿನಃ ನಮ್ಮ ಬಳಿ ಭೂಮಿ ಇದೆ ಎಂದು ರೈತರಲ್ಲದವರದು ಮುಂದೆ ಬಂದರೆ ಅದನ್ನು ಒಪ್ಪಿಕೊಳ್ಳದಿರಲು ಸರ್ಕಾರ ನಿರ್ಧರಿಸಿದೆ.