ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಯೋಜನೆಯಲ್ಲಿ ಮಹತ್ವದ ಹೆಜ್ಜೆಯನ್ನಿಡಲಾಗಿದ್ದು, ಇಂದು ಮೊದಲ ಹಂತದಲ್ಲಿ 1754 ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ನಲ್ಲಿ ಘೋಷಿಸಿದ್ದಂತೆ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದ್ದು, ಈಗಾಗಲೇ ಮೊದಲ ಹಂತದಲ್ಲಿ 5956 ಗ್ರಾಮ ಪಂಚಾಯತ್‌ನಲ್ಲಿ ಒಂದೊಂದು ಆದ್ಯತಾ ಗುಂಪುಗಳನ್ನು ರಚಿಸಲಾಗಿದೆ.
ಮೊದಲ ಹಂತದಲ್ಲಿ 1754 ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ ಬಿಡುಗಡೆ ಮಾಡಲಾಗಿದ್ದು, ಇನ್ನೊಂದು ವಾರದಲ್ಲಿ ನೋಂದಣಿಯಾಗಿರುವ ಎಲ್ಲ ಗುಂಪುಗಳಿಗೆ ಸುತ್ತುನಿಧಿ ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ ಒಂದು ವಾರದೊಳಗೆ ಎರಡನೇ ಹಂತದಲ್ಲಿ ಪ್ರತಿ ಪಂಚಾಯತ್ಗೆ ಎರಡರಂತೆ 12 ಸಾವಿರ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಹಕ್ಕು ಬಾಧ್ಯತಾ ಗುಂಪುಗಳ ರಚನಾ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಪ್ರತಿ ಗುಂಪುಗಳಿಗೆ ತಲಾ 10 ಸಾವಿರ ಸುತ್ತುನಿಧಿ, ಯೋಜನಾ ಚಟುವಟಿಕೆಗಳನ್ನು ಕೈಗೊಳ್ಳಲು 5 ಲಕ್ಷ ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಒಂದು ಲಕ್ಷ ರೂ. ಸಬ್ಸಿಡಿ ನೀಡಲಾಗುವುದು. SYSY ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ವಿಷನ್ ಕರ್ನಾಟಕ ಫೌಂಡೇಷನ್ ಬೆಂಗಳೂರು ಎಂಬ ಸಂಸ್ಥೆಯ ಮೂಲಕ ಈಗಾಗಲೇ 85 ಯೋಜನಾ ವರದಿಗಳನ್ನು ತಯಾರಿಸಿ https://sysykar.in ಪೋರ್ಟಲ್ನಲ್ಲಿ ಅಳವಡಿಸಲಾಗಿದ್ದು, ರಚನೆಗೊಂಡಂತಹ ಗುಂಪುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.