ಕರ್ನಾಟಕ

karnataka

ETV Bharat / state

ಅಮೂಲ್ಯ ಪ್ರಕರಣ ಎನ್ಐಎ ತನಿಖೆಗೆ ವಹಿಸುವ ಅಗತ್ಯವೇನಿದೆ? ಅರ್ಜಿದಾರರಿಗೆ ಹೈಕೋರ್ಟ್ ಪ್ರಶ್ನೆ - ರಾಷ್ಟ್ರೀಯ ತನಿಖಾ ಸಂಸ್ಥೆ

ಪ್ರಕರಣವನ್ನು ಎನ್​ಐಎ ತನಿಖೆಗೆ ವಹಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿರುವ ವಕೀಲ ವಿಶಾಲ ರಘು ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಿದೆ.

High court news
ಹೈಕೋರ್ಟ್

By

Published : Jul 3, 2020, 8:10 PM IST

ಬೆಂಗಳೂರು :ವಿದ್ಯಾರ್ಥಿನಿ ಅಮೂಲ್ಯ ಲಿಯೋನ್ ಪಾಕಿಸ್ತಾನದ ಪರ ಘೋಷಣೆ ಕೂಗಿದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ವಹಿಸುವಂತಹ ವಿಶೇಷತೆ ಏನಿದೆ ಎಂದು ಹೈಕೋರ್ಟ್ ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದೆ.

ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಮಂಡ್ಯದ ವಕೀಲ ವಿಶಾಲ ರಘು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ಪವನ್ ಚಂದ್ರ ಶೆಟ್ಟಿ ವಾದಿಸಿ, ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸಿಲ್ಲ. ನಿಗದಿತ 90 ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸದೇ ಇದ್ದುದರಿಂದ ಆರೋಪಿಗೆ ಜಾಮೀನು ಲಭ್ಯವಾಗಿದೆ ಎಂದು ತಿಳಿಸಿದರು.

ವಕೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ಪೀಠ, ನಿಗದಿತ ಅವಧಿಯಲ್ಲಿ ದೋಷಾರೋಪ‌ ಪಟ್ಟಿ ಸಲ್ಲಿಸದ ಪ್ರಕರಣ ಇದೊಂದೇನಾ? ಇಂತಹ ಪ್ರಕರಣಗಳು ಸಾಕಷ್ಟಿವೆ. ಇನ್ನೂ 90 ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಆರೋಪಿಗೆ ದೊರೆತಿರುವ ಜಾಮೀನು ರದ್ದುಪಡಿಸಬಹುದೇ? ಎಂದು ಮರು‌ ಪ್ರಶ್ನೆ ಮಾಡಿತು. ವಕೀಲರು ಉತ್ತರಿಸಿ, ದೇಶದ ವಿರುದ್ಧ ಘೋಷಣೆ ಕೂಗಿದ್ದರಿಂದ ಪ್ರಕರಣವು ಗಂಭೀರ ಸ್ವರೂಪದ್ದಾಗಿದೆ‌ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಗದಿತ ಅವಧಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗದಿದ್ದರೆ ಜಾಮೀನು ಪಡೆಯುವ ಹಕ್ಕು ಆರೋಪಿಗೆ ಸಹಜವಾಗಿ ದಕ್ಕುತ್ತದೆ. ಈ ಜಾಮೀನು ರದ್ದುಪಡಿಸಲು ಯಾವ ಕಾನೂನು ಹೇಳುತ್ತದೆ? ಎಂದು ಪ್ರಶ್ನಿಸಿತು. ಸಮಯದ‌ ಅಭಾವ ಇದ್ದುದರಿಂದ ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ : ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಫೆ.20 ರಂದು ನಗರದ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿನಿ ಅಮೂಲ್ಯ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಳು. ಕೂಡಲೇ ಅಮೂಲ್ಯಳನ್ನು ವಶಕ್ಕೆ ಪಡೆದಿದ್ದ ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಆದರೆ, ನಿಗದಿತ 90 ದಿನಗಳಲ್ಲಿ ತನಿಖಾಧಿಕಾರಿ ದೋಷಾರೋಪ ಪಟ್ಟಿ‌ ಸಲ್ಲಿಸದಿದ್ದಕ್ಕೆ ವಿಚಾರಣಾ ನ್ಯಾಯಾಲಯ ಜೂನ್ 10ರಂದು ಅಮೂಲ್ಯಗೆ ಜಾಮೀನು ನೀಡಿತ್ತು. ಆ ಬಳಿಕ ಪ್ರಕರಣವನ್ನು ಎನ್ ಎ ಐ ತನಿಖೆಗೆ ವಹಿಸಬೇಕೆಂದು ಕೋರಿ ವಕೀಲ ವಿಶಾಲ ರಘು ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಿದೆ.

ABOUT THE AUTHOR

...view details