ಕರ್ನಾಟಕ

karnataka

ETV Bharat / state

ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್! - ಡಿಸಿಎಂ ಲಕ್ಷ್ಮಣ ಸವದಿ

ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಖಾಸಗಿ ಬಸ್ ಮಾಲೀಕರಿಗಾಗುತ್ತಿರುವ ನಷ್ಟ ತಗ್ಗಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

rivate bus travel rate hike
ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್

By

Published : Jun 11, 2020, 7:56 PM IST

ಬೆಂಗಳೂರು: ಕೊರೊನಾ ಹಾವಳಿಯಿಂದ ರಾಜ್ಯದಲ್ಲಿ ಸಾರಿಗೆ ಕ್ಷೇತ್ರ ತತ್ತರಿಸಿ ಹೋಗಿದ್ದು, ಖಾಸಗಿ ಬಸ್ ಮಾಲೀಕರಿಗಾಗುತ್ತಿರುವ ನಷ್ಟ ತಗ್ಗಿಸಲು ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಖಾಸಗಿ ಬಸ್​ ಪ್ರಯಾಣ ದರ ದುಬಾರಿಯಾಗಲಿದೆ. ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳ ಮಾಡದಿರುವ ನಿರ್ಧಾರ ಪ್ರಯಾಣಿಕರಿಗೆ ಕೊಂಚ ನೆಮ್ಮದಿ ಮೂಡಿಸಿದೆ.

ರಾಜ್ಯದಲ್ಲಿ ಹವಾನಿಯಂತ್ರಿತ ಸೇರಿದಂತೆ ಎಲ್ಲಾ ಮಾದರಿಯ ಬಸ್​​ಗಳ ಸಂಚಾರಕ್ಕೆ, ದಿನದ 24 ಗಂಟೆಗೂ ಅನ್ವಯವಾಗುವಂತೆ ಸರ್ಕಾರ ಅನುಮತಿ ನೀಡಿದೆ. ಕೋವಿಡ್ - 19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಸೂಚನೆ ನೀಡಿದೆ. ಅದರಂತೆ ಬಹುತೇಕ ಆಸನ ಸಾಮರ್ಥ್ಯದ ಶೇ.50 ರಷ್ಟು ಪ್ರಮಾಣದಲ್ಲಿ, ಮಾತ್ರ ಪ್ರಯಾಣಿಕರಿಗೆ ಅವಕಾಶ ನೀಡಬೇಕಿದೆ. ಇದರಿಂದ ಶೇ.50 ರಷ್ಟು ನಷ್ಟವಾಗುವ ಕಾರಣಕ್ಕೆ ಖಾಸಗಿ ಬಸ್​​​​​ಗಳನ್ನು ರಸ್ತೆಗಿಳಿಸಲು ಖಾಸಗಿ ಬಸ್ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಸರ್ಕಾರ ಶೇ.15 ರಷ್ಟು ಪ್ರಯಾಣ ದರ ಹೆಚ್ಚಳ ಮಾಡಲು ಖಾಸಗಿ ಬಸ್ ಮಾಲೀಕರಿಗೆ ಅನುಮತಿ ನೀಡಿದೆ.

ಖಾಸಗಿ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್

ಟಿಕೆಟ್ ದರ ಹೆಚ್ಚಿಸಿದರೂ 8 ಸಾವಿರದಷ್ಟಿರುವ ರೂಟ್ ಬಸ್​​​ಗಳಲ್ಲಿ ಕೆಲವು ಮಾತ್ರ ರಸ್ತೆಗಿಳಿದಿವೆ. ಜನರಲ್ಲಿ ಕೊರೊನಾ ಭಯ ಕಾಡುತ್ತಿದ್ದು, ಕೊರೊನಾ ಆತಂಕದಿಂದ ಪ್ರಯಾಣ ಮಾಡಲು ಹಿಂದೇಟು ಹಾಕುತ್ತಿರುವುದು ಇದಕ್ಕೆ ಕಾರಣವಾಗಿದೆ. ಇದರ‌ ಜೊತೆಗೆ ತೆರಿಗೆ ವಿನಾಯಿತಿ ನೀಡುವ ಮೂಲಕ ಈಗಾಗಲೇ ಆಗಿರುವ ನಷ್ಟಕ್ಕೆ ನೆರವಾಗುವಂತೆ ಖಾಸಗಿ ಬಸ್ ಮಾಲೀಕರು ಪಟ್ಟು ಹಿಡಿದಿದ್ದಾರೆ.

ಪ್ರಯಾಣಿಕರಿಂದ ಹೆಚ್ಚುವರಿಯಾಗಿ ಶೇ.15 ರ ಪ್ರಯಾಣ ದರ ಪಡೆಯುವುದು ಪ್ರಸ್ತುತ ನಷ್ಟದ ಹೊರೆ ಕಡಿಮೆ ಮಾಡಲಿದೆ. ಆದರೆ ಲಾಕ್​​​​ಡೌನ್​​​​ನಿಂದ ಆಗಿರುವ ನಷ್ಟಕ್ಕೆ ಸರ್ಕಾರ ನೆರವು ನೀಡಬೇಕು. ಆರು ತಿಂಗಳ ರಸ್ತೆ ತೆರಿಗೆ ವಿನಾಯಿತಿ ನೀಡಬೇಕು. ಮತ್ತೆ ಆರು ತಿಂಗಳು ಶೇ.50 ರಷ್ಟು ತೆರಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ರಾಜ್ಯದಲ್ಲಿ ಕೆಎಸ್ಆರ್​​​​ಟಿಸಿ ಸೇರಿದಂತೆ ನಾಲ್ಕು ನಿಗಮಗಳ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡದೇ ಇರಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಸದ್ಯ ನಾಲ್ಕು ನಿಗಮದಿಂದ 24 ಸಾವಿರ ಬಸ್​​​ಗಳಿದ್ದು, ಕೆಎಸ್​​ಆರ್​​​​ಟಿಸಿ ಒಂದರಲ್ಲೇ 8,657 ಬಸ್​​​​ಗಳಿವೆ. ಆದರೆ ಇದರಲ್ಲಿ ರಸ್ತೆಗಿಳಿಸಿರುವುದು ಕೇವಲ 3,091 ಬಸ್​​​​​​ಗಳನ್ನು ಮಾತ್ರ.

3 ಲಕ್ಷದಿಂದ 3.50 ಲಕ್ಷದವರೆಗೆ ಪ್ರಯಾಣಿಕರು ಪ್ರತಿದಿನ ಸಂಚರಿಸುತ್ತಿದ್ದು, ಇತರ ನಿಗಮಗಳನ್ನು ಸೇರಿಸಿದರೂ 6 ಲಕ್ಷ ದಾಟುತ್ತಿಲ್ಲ. ಲಾಕ್​​​​ಡೌನ್​​​​ಗೂ ಮೊದಲು ಪ್ರತಿ ದಿನ 1 ಕೋಟಿಯಷ್ಟು ಜನ ಪ್ರಯಾಣ ಮಾಡುತ್ತಿದ್ದರು. ಆದರೆ ಈಗ ಪ್ರಯಾಣಿಕರಿಗೆ ಸಂಖ್ಯೆ ಕೇವಲ ಶೇ. 6 ರಷ್ಟಾಗಿದೆ. ಇದಕ್ಕೆ ಕಾರಣ ಜನರಲ್ಲಿ ಇನ್ನೂ ಕೊರೊನಾ ಭಯ ಇರುವುದು.

ಈ ಕುರಿತು ಸಾರಿಗೆ ಸಚಿವರೂ ಆಗಿರುವ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಈಗಾಗಲೇ ₹ 2,200 ಕೋಟಿ ನಷ್ಟ ಅನುಭವಿಸಿರುವ ಸಾರಿಗೆ ನಿಗಮಗಳು ಪ್ರಯಾಣಿಕರಿಲ್ಲದೇ ಖಾಲಿ ಬಸ್ ಓಡಿಸಲಾಗುತ್ತಿದೆ. ಪ್ರತಿ ದಿನವೂ ಮತ್ತೆ ನಷ್ಟಕ್ಕೆ ಒಳಗಾಗುತ್ತಿವೆಯಾದರೂ ಕೂಡ, ಈಗಾಗಲೇ ಲಾಕ್​​​​​ಡೌನ್​​​​ನಿಂದ ಕಷ್ಟಕ್ಕೆ ಸಿಲುಕಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ, ಪ್ರಯಾಣ ದರ ಹೆಚ್ಚಿಸಬಾರದು ಎನ್ನುವ ಕಾರಣಕ್ಕೆ ಬಸ್ ದರ ಹೆಚ್ಚಿಸದೇ ಸರ್ಕಾರವೇ ಈ ಹೊರೆ ಭರಿಸಲಿದೆ ಎಂದು ತಿಳಿಸಿದ್ದಾರೆ.

ಲಾಕ್​​​​ಡೌನ್ ಸಡಿಲಿಕೆ ನಂತರ ಸಾರಿಗೆ ಸೇವೆ ಆರಂಭಗೊಂಡರೂ ಜನರು ಬಸ್​​​​ಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ನಷ್ಟದ ಹೊರೆ ಕಡಿಮೆ ಮಾಡಿಕೊಳ್ಳಲು ಸಾರಿಗೆ ನಿಗಮಗಳು ಸರ್ಕಾರದ ನೆರವಿನ ಮೊರೆ ಹೋದರೆ, ಖಾಸಗಿ ಬಸ್ ಮಾಲೀಕರು ಪ್ರಯಾಣ ದರ ಹೆಚ್ಚಳದಿಂದ ಬರುವ ಹೆಚ್ಚುವರಿ ಹಣವನ್ನು ಅವಲಂಬಿಸಬೇಕಾಗಿದೆ.

ABOUT THE AUTHOR

...view details