ಬೆಂಗಳೂರು: ಚರ್ಮಗಂಟು ರೋಗದಿಂದ ಸಾವಿಗೀಡಾದ ಜಾನುವಾರುಗಳ ಮಾಲೀಕರಿಗೆ ಪರಿಹಾರ ಧನ ನೀಡಲು 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಚರ್ಮಗಂಟು ರೋಗದ ಹಾವಳಿ ಹೆಚ್ಚಾಗಿದ್ದು, ನೇರವಾಗಿ ಜಾನುವಾರುಗಳ ಆರೋಗ್ಯವನ್ನು ಹದಗೆಡಿಸಿ ಜಾನುವಾರುಗಳ ಉತ್ಪಾದಕತೆ ಕುಂಠಿತವಾಗುತ್ತಿದೆ. ಇದರಿಂದ ರೈತರು ಹಾಗೂ ಜಾನುವಾರು ಮಾಲೀಕರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ. ಈ ರೋಗದಿಂದ ಉಂಟಾಗುವ ಜಾನುವಾರುಗಳ ಮರಣದಿಂದ ರೈತರ/ಜಾನುವಾರು ಮಾಲೀಕರಿಗೆ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಸರ್ಕಾರ ಪರಿಹಾರ ಧನ ನೀಡಲು ನಿರ್ಧರಿಸಿದೆ.
ಅದರಂತೆ ಚರ್ಮಗಂಟು ರೋಗದಿಂದ ಮರಣಿಸಿದ ಪ್ರತಿ ಕರುವಿಗೆ 5,000 ರೂ., ಪ್ರತಿ ಹಸುವಿಗೆ 20,000 ರೂ., ಪ್ರತಿ ಎತ್ತುಗಳಿಗೆ 30,000 ರೂ. ನಿಗದಿಗೊಳಿಸಲಾಗಿದೆ. ಚರ್ಮಗಂಟು ರೋಗಕ್ಕೆ ತುತ್ತಾಗಿ ಮರಣ ಹೊಂದಿದ ಜಾನುವಾರುವಿನ ಚಿಕಿತ್ಸಾ ಮಾಹಿತಿಯನ್ನು ಆಧರಿಸಿ ಸಂಬಂಧಪಟ್ಟ ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಜಾನುವಾರುವಿನ ಮರಣ ದೃಢೀಕರಣ ಪತ್ರ ಹೊಂದಿರಬೇಕು. ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರು ವಿಮಾ ಸೌಲಭ್ಯ ಹೊಂದಿದಲ್ಲಿ ಮರಣ ಪರಿಹಾರ ಧನವನ್ನು ಪಾವತಿಸಲಾಗುವುದಿಲ್ಲ.