ಬೆಂಗಳೂರು:2021-22ನೇ ಹಣಕಾಸು ವರ್ಷದಲ್ಲಿ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್ಗಳ ಆಸ್ತಿ ತೆರಿಗೆ ಪಾವತಿಯಲ್ಲಿ (ಬಿ.ಬಿ.ಎಂ.ಪಿ ಹೊರತುಪಡಿಸಿ) ಶೇ.50ರಷ್ಟು ರಿಯಾಯಿತಿಯನ್ನು ನೀಡಲು ಸರ್ಕಾರ ನಿರ್ಧರಿಸಿದೆ.
ಕೋವಿಡ್-19ರ ಎರಡೂ ಅಲೆಗಳಿಂದಾಗಿ ಪ್ರವಾಸೋದ್ಯಮದಲ್ಲಿ ಸಂಕಷ್ಟ ಉಂಟಾಗಿತ್ತು. ಹೀಗಾಗಿ ಕರ್ನಾಟಕ ಟೂರಿಸಂ ಸೊಸೈಟಿ ಕೆಲ ಪ್ರವಾಸೋದ್ಯಮದ ಚಾಲನೆಗಾಗಿ ಪುನರುಜ್ಜೀವನ ಪ್ಯಾಕೇಜ್ ನೀಡುವಂತೆ ಬೇಡಿಕೆ ಸಲ್ಲಿಸಿತ್ತು. ಈ ನಿಟ್ಟಿನಲ್ಲಿ ಸರ್ಕಾರ ಶೇ. 50 ರಷ್ಟು ಆಸ್ತಿ ತೆರಿಗೆ ಪಾವತಿಯಲ್ಲಿ ರಿಯಾಯಿತಿ ನೀಡಲು ನಿರ್ಧರಿಸಿದೆ.
ಪೌರಾಡಳಿತ ನಿರ್ದೇಶನಾಲಯ 288 ನಗರ ಸ್ಥಳೀಯ ಸಂಸ್ಥೆಗಳ (ಬಿ.ಬಿ.ಎಂ.ಪಿ ಹೊರತುಪಡಿಸಿ) ಉಳಿದ ವ್ಯಾಪ್ತಿಯಲ್ಲಿನ ಹೋಟೆಲ್ಗಳು, ಗೆಸ್ಟ್ ಹೌಸ್ಗಳು, ಲಾಡ್ಜ್ ಗಳು, ರೆಸ್ಟೋರೆಂಟ್ಗಳು 2021-22ನೇ ಹಣಕಾಸು ಸಾಲಿನ ತೆರಿಗೆ ಬೇಡಿಕೆ ಮತ್ತು 26% ಸೆಸ್ ಒಳಗೊಂಡಂತೆ ಸುಮಾರು 46.04 (36.54 + 9.49) ಕೋಟಿ ರೂ. ಇರುತ್ತದೆ.
ಒಂದು ವೇಳೆ ಆಸ್ತಿ ತೆರಿಗೆಯಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಿದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಸುಮಾರು 23.02 ಕೋಟಿ ರೂ. ಆರ್ಥಿಕ ನಷ್ಟ ಉಂಟಾಗಲಿದೆ. ಇದನ್ನು ಸರಿದೂಗಿಸಲು ಸರ್ಕಾರದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ರಿಯಾಯಿತಿ ಮೊತ್ತವನ್ನು ನೀಡಲು ಅವಶ್ಯಕತೆ ಇದೆ ಎಂದು ಮನವಿ ಮಾಡಿತ್ತು. ಆ ಸಂಬಂಧ ಸರ್ಕಾರ ನಗರ ಸ್ಥಳೀಯ ಸಂಸ್ಥೆಗಳಿಗೆ ಪರಿಹಾರ ನೀಡಲು ನಿರ್ಧರಿಸಿದೆ.