ಬೆಂಗಳೂರು: ಲಾಕ್ಡೌನ್ನಿಂದ ಈ ಬಾರಿ ರಾಜ್ಯ ಸರ್ಕಾರ ಭಾರೀ ಆರ್ಥಿಕ ಸಂಕಷ್ಟ ಅನುಭವಿಸಿದೆ. ಪ್ರಮುಖ ತೆರಿಗೆ ಮೂಲಗಳು ಬರಿದಾಗಿರುವ ಹಿನ್ನೆಲೆ ಸರ್ಕಾರ ಆದಾಯ ಕ್ರೋಢೀಕರಣಕ್ಕಾಗಿ ಪರ್ಯಾಯ ಮಾರ್ಗದ ಮೊರೆ ಹೋಗಿತ್ತು. ಆದರೆ, ಪರ್ಯಾಯ ಆದಾಯದ ಮಾರ್ಗ ನಿರೀಕ್ಷಿತ ಫಲ ನೀಡುವಲ್ಲಿ ವಿಫಲವಾಗಿದೆ.
ಕೋವಿಡ್ ಹೇರಿದ ಲಾಕ್‌ಡೌನ್ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿದೆ. ಹಿಂದೆಂದೂ ಕಂಡರಿಯದಷ್ಟು ಆದಾಯ ಖೋತಾ ಎದುರಿಸುತ್ತಿದೆ. ಅದಕ್ಕಾಗಿಯೇ ಸರ್ಕಾರ ಈ ಬಾರಿ 33,000 ಕೋಟಿ ರೂ. ಸಾಲ ಎತ್ತುವಳಿ ಮಾಡಲು ನಿರ್ಧರಿಸಿದೆ. ಪ್ರಸಕ್ತ ವರ್ಷದಲ್ಲಿ 2.37 ಲಕ್ಷ ಕೋಟಿ ರೂ. ಗಾತ್ರದ ಆಯವ್ಯಯವನ್ನು ಮಂಡಿಸಿದ್ದು 1,79,920 ಕೋಟಿ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ, ಕೊರೊನಾ ಲಾಕ್ಡೌನ್ನಿಂದಾಗಿ ತೆರಿಗೆ ಮತ್ತಿತರ ಆದಾಯ 1.14 ಲಕ್ಷ ಕೋಟಿ ರೂ.ಗೆ ಕುಸಿಯುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ 65,920 ಕೋಟಿ ರೂ. ಹಣದ ಕೊರತೆ ಎದುರಾಗಲಿದೆ.
ಈ ಬಾರೀ ಆದಾಯ ಖೋತಾ ಸರಿದೂಗಿಸಲು ಸರ್ಕಾರ ಪರ್ಯಾಯ ಆದಾಯ ಸಂಗ್ರಹದ ಮೊರೆ ಹೋಗಿತ್ತು. ಅದರಲ್ಲಿ ಪ್ರಮುಖವಾಗಿ ಬಿಡಿಎ ಕಾರ್ನರ್ ಸೈಟ್ ಹರಾಜು, ಬಿಡಿಎ ಬಡಾವಣೆಯಲ್ಲಿನ ಅಕ್ರಮ ಕಟ್ಟಡಗಳ ಸಕ್ರಮ ಪ್ರಮುಖವಾಗಿದೆ. ಉಳಿದಂತೆ ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀಸುವಾಗಿನ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ. ಕೈಗಾರಿಕೆಗಳಿಗೆ ಏಳು ವರ್ಷದ ಬಳಿಕ ಭೂಮಿ ಮಾರಾಟ ಮಾಡುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿತ್ತು. ಆದರೆ, ಈ ಪರ್ಯಾಯ ಮಾರ್ಗಗಳು ನಿರೀಕ್ಷಿತ ಫಲ ನೀಡುವಲ್ಲಿ ವಿಫಲವಾಗಿದೆ.
ಬಿಡಿಎ ನಿವೇಶನ ಹರಾಜಿನಿಂದ ಈವರೆಗೆ ಬಂದಿದ್ದೆಷ್ಟು?:
ಆದಾಯ ಸಂಗ್ರಹಕ್ಕಾಗಿ ಸರ್ಕಾರ 12,000 ಬಿಡಿಎ ಕಾರ್ನರ್ ಸೈಟ್ ಹಾರಾಜು ಹಾಕಿ 15,000 ಕೋಟಿ ರೂ. ಸಂಗ್ರಹ ಮಾಡಲು ನಿರ್ಧರಿಸಿತ್ತು. ಅದರಂತೆ ಜುಲೈ ತಿಂಗಳಿನಿಂದ ಬಿಡಿಎ ತನ್ನಲ್ಲಿನ ಮೂಲೆ ನಿವೇಶನಗಳನ್ನು ಹರಾಜು ಹಾಕುವ ಪ್ರಕ್ರಿಯೆ ಪ್ರಾರಂಭಿಸಿದೆ. ಈವರೆಗೆ ಮೂರು ಹಂತಗಳಲ್ಲಿ ಬಿಡಿಎ ನಿವೇಶನ ಹರಾಜು ಹಾಕಲಾಗಿದೆ. ಆದರೆ ಬಿಡಿಎಗೆ ಈ ಹರಾಜಿನಿಂದ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ. ಇನ್ನೊಂದೆಡೆ ಬಿಡಿಎ ನಿವೇಶನ ಹರಾಜಿಗೆ ಜನರಿಂದ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ.
ಬಿಡಿಎ ನೀಡಿರುವ ಅಂಕಿ-ಅಂಶದ ಪ್ರಕಾರ ಮೊದಲ ಹಂತದ ಹರಾಜಿನಲ್ಲಿ 70 ನಿವೇಶನಗಳನ್ನು ಹರಾಜಿಗಿಡಲಾಗಿತ್ತು. ಈ ಪೈಕಿ 61 ನಿವೇಶನಗಳನ್ನು ಮಾರಾಟ ಮಾಡಲಾಗಿತ್ತು. ಒಟ್ಟು 46.14 ಕೋಟಿ ರೂ. ಮೌಲ್ಯದ ನಿವೇಶನವನ್ನು ಹರಾಜು ಮಾಡಲಾಯಿತು. ಆ ಮೂಲಕ ಒಟ್ಟು 18.90 ಕೋಟಿ ರೂ. ಗಳಿಕೆ ಮಾಡಿದೆ.ಇನ್ನು ಎರಡನೇ ಹಂತದ ಹರಾಜಿನಲ್ಲಿ 308 ನಿವೇಶನಗಳನ್ನು ಹರಾಜಿಗೆ ಇಡಲಾಗಿತ್ತು. ಆ ಪೈಕಿ 240 ನಿವೇಶನಗಳನ್ನು ಹರಾಜು ಮಾಡಲಾಯಿತು. ಒಟ್ಟು ಹರಾಜು ಮೌಲ್ಯ 171.99 ಕೋಟಿ ರೂ. ಆ ಮೂಲಕ 68.12 ಕೋಟಿ ರೂ. ಗಳಿಕೆ ಮಾಡಿತು. ಮೂರನೇ ಹಂತದಲ್ಲಿ 402 ನಿವೇಶನಗಳನ್ನು ಹರಾಜಿಗೆ ಇಡಲಾಯಿತು. ಮಾರಾಟವಾಗಿದ್ದು 286 ನಿವೇಶನಗಳು. ಒಟ್ಟು 266.31 ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಹರಾಜು ಮಾಡಲಾಯಿತು. ಆ ಮೂಲಕ 85.86 ಕೋಟಿ ರೂ. ಗಳಿಕೆ ಮಾಡಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕನೇ ಹಂತದ ಹರಾಜು ಪ್ರಕ್ರಿಯೆಯಲ್ಲಿದ್ದು, ಒಟ್ಟು 448 ನಿವೇಶನ ಹರಾಜಿಗಿಡಲಾಗಿದೆ. ಈವರೆಗೆ ಮೂರು ಹಂತಗಳ ಹರಾಜಿನ ಮೂಲಕ ಬಿಡಿಎ ಗಳಿಕೆ ಮಾಡಿರುವುದು ಕೇವಲ 172.88 ಕೋಟಿ ರೂ. ಮಾತ್ರ. ಬಿಡಿಎ ಮೂಲೆ ನಿವೇಶನ ಹರಾಜಿನ ಮೂಲಕ 15,000 ಕೋಟಿ ರೂ. ಆದಾಯ ಸಂಗ್ರಹದ ನಿರೀಕ್ಷೆ ಇಟ್ಟಿದೆ. ಸದ್ಯದ ಅಂಕಿ-ಅಂಶ ನೋಡಿದರೆ ಆ ನಿರೀಕ್ಷೆ ಹುಸಿಯಾಗುವುದು ಖಚಿತ.
ಇನ್ನೂ ಜಾರಿಯಾಗದ ಬಿಡಿಎ ಅಕ್ರಮ-ಸಕ್ರಮ:
ಸರ್ಕಾರ ಆದಾಯ ಸಂಗ್ರಹಕ್ಕಾಗಿ ಮೊರೆ ಹೋಗಿರುವ ಮತ್ತೊಂದು ಪರ್ಯಾಯ ಮಾರ್ಗ ಬಿಡಿಎ ಬಡಾವಣೆಯಲ್ಲಿನ ಕಟ್ಟಡಗಳ ಅಕ್ರಮ ಸಕ್ರಮ. ಜೊತೆಗೆ ಬಿಡಿಎ ವಿವಿಧ ಬಡಾವಣೆಗಳಲ್ಲಿರುವ ಸುಮಾರು 75,000 ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸಿ ಆದಾಯ ಸಂಗ್ರಹಿಸಲು ಮುಂದಾಗಿದೆ. ಆ ಮೂಲಕ ಸುಮಾರು 8,000 ಕೋಟಿ ರೂ. ಆದಾಯ ಸಂಗ್ರಹದ ನಿರೀಕ್ಷೆ ಇಟ್ಟಿದೆ. ಆದರೆ, ಈ ಅಕ್ರಮ ಸಕ್ರಮ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
20/30 ನಿವೇಶನದಲ್ಲಿ ಕಟ್ಟಡ ಕಟ್ಟಿದವನು ಮಾರ್ಗಸೂಚಿ ದರದ (ಗೈಡೆನ್ಸ್ ವ್ಯಾಲ್ಯೂ) 10% ದಂಡ ಕಟ್ಬಬೇಕು. 20/30 ಮೇಲ್ಪಟ್ಟು 30/40 ವರೆಗಿನ ನಿವೇಶನದಲ್ಲಿ ಕಟ್ಟಡ ಕಟ್ಟಿದವನು ಮಾರ್ಗಸೂಚಿ ದರದ 20% ದಂಡ ಕಟ್ಟಬೇಕು 30/40 ಮೇಲ್ಪಟ್ಟು 40/60 ವರೆಗಿನ ನಿವೇಶನದಲ್ಲಿ ಕಟ್ಟಡ ಕಟ್ಟಿದವನು ಮಾರ್ಗಸೂಚಿ ದರದ 40% ದಂಡ ಪಾವತಿಸಿ ಸಕ್ರಮಗೊಳಿಸಬೇಕು. ಇನ್ನು 40/60 ಮೇಲ್ಪಟ್ಟು 50/80 ವರೆಗಿನ ನಿವೇಶನದಲ್ಲಿ ಕಟ್ಟಡ ಕಟ್ಟಿದವನು ಮಾರ್ಗಸೂಚಿ ದರದ 50% ದಂಡವನ್ನು ಪಾವತಿಸಬೇಕು. ಕಾರ್ನರ್ ಸೈಟ್ ನಲ್ಲಿ ಕಟ್ಟಡ ಕಟ್ಟಿದವನು ಆಯಾ ವಿಸ್ತೀರ್ಣದ ನಿವೇಶನದ ನಿಗದಿತ ಮೊತ್ತದ ಎರಡು ಪಟ್ಟು ದಂಡ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.ಆದರೆ, ಕಾನೂನು ತೊಡಕಿನ ಹಿನ್ನೆಲೆ ಬಿಡಿಎ ಅಕ್ರಮ ಸಕ್ರಮವನ್ನು ಇನ್ನೂ ಜಾರಿಗೊಳಿಸಲು ಸಾಧ್ಯವಾಗಿಲ್ಲ.
ಕಾನೂನು ಕಗ್ಗಂಟಿನ ಮಧ್ಯೆ ಬಿಡಿಎ ಅಕ್ರಮ ಸಕ್ರಮ ಜಾರಿಗೊಳಿಸುವುದು ಕಷ್ಟಸಾಧ್ಯ ಎಂಬ ಅರಿವು ಸರ್ಕಾರಕ್ಕೆ ಆಗಿದೆ. ಹೀಗಾಗಿ ಬಿಡಿಎ ಮೂಲಕ ಒಟ್ಟು ಸುಮಾರು 25,000 ಕೋಟಿ ರೂ. ಆದಾಯ ಸಂಗ್ರಹಿಸುವ ನಿರೀಕ್ಷೆ ಇಟ್ಟಿದ್ದ ಸರ್ಕಾರಕ್ಕೆ ಭ್ರಮ ನಿರಸನ ಆಗಿದೆ. ಇತ್ತ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿ ಮೂಲಕ ಸರ್ಕಾರ ಆದಾಯ ಸಂಗ್ರಹದ ಗುರಿ ಹೊಂದಿದೆ. ಆದರೆ, ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯೂ ಅನೇಕ ತೊಡಕುಗಳನ್ನು ಎದುರಿಸುತ್ತಿದ್ದು, ಸುಗಮವಾಗಿ ಜಾರಿಯಾಗುವುದು ಕಷ್ಟಕರವಾಗಿದೆ. ಹೀಗಾಗಿ ನಿರೀಕ್ಷಿತ ಮಟ್ಟದ ಆದಾಯ ಸಂಗ್ರಹ ಸದ್ಯಕ್ಕೆ ಕಷ್ಟ ಎಂಬುದು ಸರ್ಕಾರಕ್ಕೆ ಮನದಟ್ಟಾಗಿದೆ.