ಬೆಂಗಳೂರು: ಕೋವಿಡ್ ಲಾಕ್‌ಡೌನ್ ಹಿನ್ನೆಲೆ ಪ್ರೊಫೆಷನಲ್ ತೆರಿಗೆ ಪಾವತಿ ಗಡುವು ದಿನಾಂಕವನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹಣಕಾಸು ಇಲಾಖೆ ಹೊರಡಿಸಿದ ಆದೇಶದಂತೆ ಉದ್ಯೋಗಿಗಳು, ವರ್ತಕರ ಮೇಲಿನ ಕರ್ನಾಟಕ ತೆರಿಗೆ ಮತ್ತು ಉದ್ಯೋಗ ಕಾಯ್ದೆ 1976ರ 10ನೇ ಪರಿಚ್ಛೇದದಡಿ ನೋಂದಾಯಿತ ವ್ಯಕ್ತಿಗಳು ಕಡ್ಡಾಯವಾಗಿ ಪ್ರೊಫೆಷನಲ್ ತೆರಿಗೆಯ ರಿಟರ್ನ್ಸ್ ಸಲ್ಲಿಕೆ ಮಾಡಬೇಕು. ಕೋವಿಡ್ ಹಿನ್ನೆಲೆ ಹೇರಲಾದ ಲಾಕ್‌ಡೌನ್ ನಿಂದಾಗಿ ಈ ಪ್ರೊಫೆಷನಲ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವ ಗಡುವನ್ನು ಜೂನ್ 30ಕ್ಕೆ ವಿಸ್ತರಿಸಲಾಗಿದೆ.
ಸಾಮಾನ್ಯವಾಗಿ ಈ ಕಾಯ್ದೆಯಡಿ ವ್ಯಕ್ತಿ ಪ್ರತಿ ಬಾರಿ ಹಣಕಾಸು ವರ್ಷ ಆರಂಭದ ಮುನ್ನ ನೋಂದಣಿ ಮಾಡಿಕೊಂಡಿದ್ದರೆ, ಪ್ರೊಫೆಷನಲ್ ಟ್ಯಾಕ್ಸ್ ಅನ್ನು ಏಪ್ರಿಲ್ 30 ಒಳಗಡೆ ಪಾವತಿ ಮಾಡಬೇಕಾಗಿತ್ತು. ಇನ್ನು ಹಣಕಾಸು ವರ್ಷ ಆರಂಭವಾದ ಬಳಿಕ ನೋಂದಣಿ ಮಾಡಿಕೊಂಡಿದ್ದರೆ, ಆ ವ್ಯಕ್ತಿ ನೋಂದಣಿ ಮಾಡಿದ ದಿನಾಂಕದಿಂದ 30 ದಿನದೊಳಗಾಗಿ ತೆರಿಗೆ ಪಾವತಿ ಮಾಡಬೇಕಾಗಿತ್ತು.
ಕೋವಿಡ್- 19 ಮತ್ತು ಲಾಕ್‌ಡೌನ್ ಹಿನ್ನೆಲೆ ನೋಂದಾಯಿತ ವ್ಯಕ್ತಿ, ವರ್ತಕರು ಹಾಗೂ ಸಂಸ್ಥೆಗಳಿಗೆ ನಿಗದಿತ ದಿನಾಂಕದೊಳಗೆ ಪ್ರೊಫೆಷನಲ್ ಟ್ಯಾಕ್ಸ್ ರಿಟರ್ನ್ ಮಾಡಲು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಪಾವತಿ ದಿನಾಂಕದ ಗಡುವನ್ನು ವಿಸ್ತರಿಸುವಂತೆ ಮನವಿ ಮಾಡಲಾಗಿತ್ತು. ಇದೀಗ ಸರ್ಕಾರ ಪಾವತಿ ದಿನಾಂಕವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.