ಬೆಂಗಳೂರು :ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ)ದ ಟೆಂಡರ್ನಲ್ಲಿ ಕೋಟ್ಯಂತರ ರೂ. ಮೊತ್ತದ ಅವ್ಯವಹಾರ ನಡೆಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಈ ಬಗ್ಗೆ ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ ಎಸ್ ಉಗ್ರಪ್ಪ, ಸಚಿವ ಅಶ್ವತ್ಥ ನಾರಾಯಣ ಸಂಬಂಧಿ ಜಿಟಿಟಿಸಿ ಎಂಡಿ ಹೆಚ್ ರಾಘವೇಂದ್ರ ವಿರುದ್ಧ ಆರೋಪ ಮಾಡಿದ್ದಾರೆ. ಜಿಟಿಟಿಸಿಯಲ್ಲಿ ಉಪಕರಣ ಖರೀದಿಗೆ ₹60 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ನಡೆದಿದೆ.
ಒಟ್ಟು 8 ಟೆಂಡರ್ಗಳನ್ನು ನಡೆಸುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ. ಇದಲ್ಲದೇ ಇನ್ನು 8 ಟೆಂಡರ್ಗಳು ಬಹುತೇಕ ಅಂತಿಮ ಹಂತದಲ್ಲಿವೆ. ಇವು ಸಹ ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಇದರ ಮೊತ್ತ ಕೂಡ 40 ಕೋಟಿ ರೂ. ಮೀರಿದೆ ಎಂದು ಆರೋಪಿಸಿದ್ದಾರೆ.
1 ಕೋಟಿಗೂ ಅಧಿಕ ಮೊತ್ತದ ಬಿಡ್‌ಗಳಿಗೆ ಪ್ರಿಬಿಡ್ ಮೀಟಿಂಗ್ ಕರೆಯಬೇಕು. ಆದರೆ, 8 ಟೆಂಡರ್ಗಳು ಅದಕ್ಕಿಂತ ದೊಡ್ಡ ಮಟ್ಟದ್ದಾಗಿವೆ. ಟೆಂಡರ್ ಪೂರ್ವ ಸಭೆ ಕರೆಯದೇ ಅಂತಿಮಗೊಳಿಸಲಾಗಿದೆ. ಕೇವಲ 2 ಕಂಪನಿಗಳು ಮಾತ್ರ ಟೆಂಡರ್ನಲ್ಲಿ ಭಾಗವಹಿಸಿದ್ದರೂ, ರೀ ಟೆಂಡರ್ ಮಾಡದೇ ಖರೀದಿ ಮಾಡಲು ಅವಕಾಶ ನೀಡಲಾಗಿದೆ.
ಲ್ಯಾಪ್‌ಟಾಪ್ ಖರೀದಿಯಲ್ಲೂ ಅಕ್ರಮ ಆರೋಪ :2019ರಲ್ಲಿ ಒಂದು ಸಿಎನ್ಸಿ ಮಷಿನ್ಗೆ ₹28 ಲಕ್ಷ ನೀಡಿ ಖರೀದಿ ಮಾಡಿದ್ದಾರೆ. 2020ರಲ್ಲಿ ಸಿಎನ್ಸಿ ಮಷಿನ್ಗೆ 31ಲಕ್ಷ ರೂ. ಕೊಟ್ಟು ಖರೀದಿಸಲಾಗಿದೆ. ಅದೇ ಮಷಿನ್ಗೆ ಜಿಟಿಟಿಸಿಯಿಂದ 99 ಲಕ್ಷ ರೂ. ಕೊಟ್ಟು ಸಿಎನ್ಸಿ ಮಷಿನ್ ಖರೀದಿ ಮಾಡಲಾಗಿದೆ.