ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು ಫಲಕಗಳು: ಅಧಿಸೂಚನೆ ಹೊರಡಿಸಿದ ಸರ್ಕಾರ - ಜಾಹೀರಾತು ಫಲಕಗಳು,

ಸಿಲಿಕಾನ್​ ಸಿಟಿಯಲ್ಲಿ ಮತ್ತೆ ಜಾಹೀರಾತುಗಳು ಅಬ್ಬರಿಸಲಿವೆ. ಈ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಈ ಹೊಸ ನಿಯಮದಂತೆ ಜಾಹೀರಾತು ಏಜೆನ್ಸಿಗಳು ಕಡ್ಡಾಯವಾಗಿ ಪರವಾನಗಿ ಪಡೆದು, ಮೂರು ವರ್ಷಕ್ಕೊಮ್ಮೆ ನವೀಕರಣಗೊಳಿಸಬೇಕು. ಪಾಲಿಕೆ ಮುಖ್ಯ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಮೂರು ವರ್ಷಗಳ ಅವಧಿಯ ಪರವಾನಗಿಗೆ 50 ಸಾವಿರ ರೂ. ಶುಲ್ಕ ಪಾವತಿಸಬೇಕಿದೆ.

Government endorsement of commercial advertising in bangalore city
ರಾಜಧಾನಿ ಬೆಂಗಳೂರಲ್ಲಿ ಮತ್ತೆ ರಾರಾಜಿಸಲಿವೆ ಜಾಹಿರಾತು ಫಲಕಗಳು

By

Published : Jul 28, 2021, 7:35 PM IST

ಬೆಂಗಳೂರು: ಮೂರು ವರ್ಷಗಳ ಬಳಿಕ ನಗರದಲ್ಲಿ ಮತ್ತೆ ವಾಣಿಜ್ಯ ಜಾಹೀರಾತು ಪ್ರದರ್ಶನಕ್ಕೆ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರ ಜುಲೈ 26 ರಂದು ಎಲ್ಲ‌ ಬಗೆಯ ಜಾಹೀರಾತು ಹೋರ್ಡಿಂಗ್ಸ್ ಗಳ ಅಳವಡಿಕೆಗೆ ಅನುಮತಿ ನೀಡುವ ಪ್ರಸ್ತಾವನೆಗೆ ಅಂಕಿತ ಹಾಕಿದೆ.

ಬಿಬಿಎಂಪಿ ಕಾಯ್ದೆ-2020 ರನ್ನೇ ಬಳಸಿಕೊಂಡು, ಬಿಬಿಎಂಪಿ ಜಾಹೀರಾತು ನಿಯಮಗಳು-2019 ಅನ್ನು ಅಖೈರುಗೊಳಿಸಲಾಗಿದೆ. ಜಾಹೀರಾತು ಏಜೆನ್ಸಿಗಳ ಒತ್ತಡಕ್ಕೆ ಮಣಿದು ನಗರದಲ್ಲಿ ಮತ್ತೆ advertising ಹಾವಳಿಗೆ ಅವಕಾಶ ಕಲ್ಪಿಸಿದಂತಾಗಿದೆ.

ಹೊಸ ನಿಯಮದಂತೆ ಜಾಹೀರಾತು ಏಜೆನ್ಸಿಗಳು ಕಡ್ಡಾಯವಾಗಿ ಪರವಾನಗಿ ಪಡೆದು, ಮೂರು ವರ್ಷಕ್ಕೊಮ್ಮೆ ನವೀಕರಣಗೊಳಿಸಬೇಕು. ಪಾಲಿಕೆ ಮುಖ್ಯ ಆಯುಕ್ತರಿಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು. ಮೂರು ವರ್ಷಗಳ ಅವಧಿಯ ಪರವಾನಗಿಗೆ 50 ಸಾವಿರ ರೂ. ಶುಲ್ಕ ಪಾವತಿಸಬೇಕು. ಖಾಸಗಿ ನಿವೇಶನ, ಕಟ್ಟಡ ಅಥವಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಜಾಗದಲ್ಲಿ ಜಾಹೀರಾತು ಪ್ರದರ್ಶಿಸಲು ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಇಲ್ಲವಾದಲ್ಲಿ ಶೇ.150 ರಷ್ಟು ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.

ಅನುಮತಿ ಪಡೆಯದೇ ಜಾಹೀರಾತು ಪ್ರದರ್ಶಿಸಿದರೆ, ನೋಟಿಸ್ ನೀಡದೆ ಪಾಲಿಕೆ ತೆರವು ಮಾಡಬಹುದಾಗಿದೆ. 100 ಚ.ಮೀ ಕಡಿಮೆ ವಿಸ್ತೀರ್ಣವಿದ್ದರೆ 5 ಸಾವಿರ, ಇದಕ್ಕಿಂತ ಹೆಚ್ಚಿನ ವಿಸ್ತೀರ್ಣಕ್ಕೆ 7 ಸಾವಿರ ರೂ. ದಂಡ ನಿಗದಿಪಡಿಸಲಾಗಿದೆ. ನಿಯಮ ಪಾಲಿಸದ ಕಂಪನಿಗಳಿಗೆ ದಿನಕ್ಕೆ ಕೇವಲ ಒಂದು ಸಾವಿರದಂತೆ ದಂಡ ವಿಧಿಸಲು ಅವಕಾಶವಿದೆ.

ವಿಧಾನಸೌಧ ಸುತ್ತಮುತ್ತ ನಿರ್ಬಂಧ:

ಹೊಸ ನಿಯಮದಂತೆ, ಕುಮಾರಕೃಪಾ ರಸ್ತೆ, ವಿಂಡ್ಸರ್ ಮ್ಯಾನರ್-ಶಿವಾನಂದ ವೃತ್ತ, ರಾಜಭವನ ರಸ್ತೆ, ಹೈಗ್ರೌಂಡ್ಸ್ ನಿಂದ ಮಿನ್ಸ್ಕ್ ಚೌಕ, ಸ್ಯಾಂಕಿ ರಸ್ತೆ, ಹೈಗ್ರೌಂಡ್ಸ್ ನಿಂದ ವಿಂಡ್ಸರ್‌ಸಿಗ್ನಲ್, ಅಂಬೇಡ್ಕರ್ ವೀದಿ, ಕೆ.ಆರ್ ವೃತ್ತದಿಂದ ಇನ್ ಫೆಂಟ್ರಿ ರಸ್ತೆ ಜಂಕ್ಷನ್, ಅಂಚೆ ಕಚೇರಿ ರಸ್ತೆ, ಕೆ.ಆರ್. ವೃತ್ತದಿಂದ ಮೈಸೂರು ಬ್ಯಾಂಕ್ ವೃತ್ತ, ಚಾಲುಕ್ಯ ವೃತ್ತ, ಮಹಾರಾಣಿ ಕಾಲೇಜು ರಸ್ತೆ, ಕೆ.ಆರ್ ವೃತ್ತ, ಕಬ್ಬನ್ ಪಾರ್ಕ್, ಲಾಲ್ ಭಾಗ್, ನೃಪತುಂಗ ರಸ್ತೆಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ.

ಇದರೊಂದಿಗೆ ದೇವಾಲಯ, ಮಸೀದಿ, ಗುರುದ್ವಾರ, ಚರ್ಚ್ ಹಾಗೂ ಧಾರ್ಮಿಕ ಸ್ಥಳಗಳಿಂದ 50 ಮೀಟರ್, ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನ ನಿರ್ಬಂಧಿಸಲಾಗಿದೆ. ಅದೇ ರೀತಿ ಮೇಲ್ಸೇತುವೆ, ರೈಲ್ವೆ ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್, ಟೆಲಿಕಾಂ ಟವರ್ ನ ಅಂಚಿನಿಂದ 3.5 ಮೀಟರ್ ಪರಿಧಿ ಹಾಗೂ ಜಲಮಂಡಳಿಯ ವಾಟರ್ ಟ್ಯಾಂಕರ್ ನಿಂದ 15 ಮೀಟರ್ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ಇಲ್ಲ. ಇದರೊಂದು ಜಾಹೀರಾತು ಫಲಕಗಳ ಅಳತೆಗಳ ಬಗ್ಗೆಯೂ ನಿಯಮ ಮಾಡಲಾಗಿದೆ.

ABOUT THE AUTHOR

...view details