ಬೆಂಗಳೂರು:ಸರ್ಕಾರಿ ನೌಕರರ ಬೇಡಿಕೆಗಳು ಸಂಪೂರ್ಣ ಇನ್ನೂ ಈಡೇರಿಲ್ಲ. ಆದರೂ ಮುಷ್ಕರ ಹಿಂಪಡೆದಿರುವುದಕ್ಕೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಖಂಡಿಸಿದೆ. ಬುಧವಾರ ನಡೆದ ರಾಜ್ಯ ಸರ್ಕಾರಿ ನೌಕರರ ಮುಷ್ಕರದಲ್ಲಿ ಭಾಗವಹಿಸಿ ಯಶಸ್ವಿ ಮಾಡಿದ ಎಲ್ಲರಿಗೂ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪರ ಅಭಿನಂದನೆಗಳನ್ನು ಹೇಳಬಯಸುತ್ತೇವೆ ಎಂದು ಒಕ್ಕೂಟದ ಅಧ್ಯಕ್ಷ ಜೈಕುಮಾರ್ ಹೆಚ್.ಎಸ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಲವಾರು ತೊಂದರೆಗಳಾಗಿವೆ. ಅದಕ್ಕಾಗಿ ನೌಕರರ ಒಕ್ಕೂಟ ವಿಷಾದಿಸುತ್ತದೆ. ಆದರೆ, ರಾಜ್ಯಸರ್ಕಾರವು ಸಕಾಲದಲ್ಲಿ ಮಧ್ಯಪ್ರವೇಶಿಸಿ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕಳೆದ ಒಂದು ವರ್ಷದಿಂದ ನೌಕರರ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳು ಸರ್ಕಾರ ಏಳನೇ ವೇತನ ಆಯೋಗ ರಚನೆ ಮಾಡಿ, ಕೂಡಲೇ 01-07-2022ರಿಂದಲೇ ಅನ್ವಯ ಆಗುವಂತೆ ವೇತನ ಪರಿಷ್ಕರಣೆ ಮಾಡಬೇಕು. ಅಲ್ಲದೇ ರಾಜ್ಯದಲ್ಲಿ NPS ರದ್ದು ಮಾಡಿ, OPS ಮರುಸ್ಥಾಪನೆ ಮಾಡಲು ಒತ್ತಾಯಿಸುತ್ತ ಬಂದಿವೆ. ಆದರೆ, ರಾಜ್ಯ ಸರ್ಕಾರ ನೌಕರರ ಒತ್ತಾಯವನ್ನು ನಿರ್ಲಕ್ಷ್ಯ ಮಾಡುತ್ತ ಬಂದಿತ್ತು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಶೇ 25ರಷ್ಟು ಮಧ್ಯಂತರ ಪರಿಹಾರ; ಶೇ40ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹ: ಇಂದು ರಾಜ್ಯ ಸರ್ಕಾರ ಏಳನೇ ವೇತನ ಆಯೋಗದ ಭಾಗವಾಗಿ 1 ಏಪ್ರಿಲ್ 2023ರಿಂದ ಅನ್ವಯ ಆಗುವಂತೆ ಶೇ 17ರಷ್ಟು ಮಧ್ಯಂತರ ಪರಿಹಾರವನ್ನು ಘೋಷಿಸಿದೆ. ಅಲ್ಲದೇ, NPS ರದ್ದು ಮಾಡಿ, OPS ಮರುಸ್ಥಾಪನೆ ಮಾಡುವ ಕುರಿತಾಗಿ ಅಧ್ಯಯನ ಮಾಡಿ ಶಿಫಾರಸುಗಳನ್ನು ಮಾಡಲು ಅಧಿಕಾರಿ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ.
ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟವು ಶೇ. 25ರಷ್ಟು ಮಧ್ಯಂತರ ಪರಿಹಾರ ಕೂಡಲೇ ಘೋಷಣೆ ಮಾಡಬೇಕು ಹಾಗೂ ಸರ್ಕಾರವು ಅಂತಿಮವಾಗಿ ಶೇ40ರಷ್ಟು ವೇತನ ಹೆಚ್ಚಿಸಲು ಅಗತ್ಯ 15000 ಕೋಟಿ ರೂಪಾಯಿಗಳ ಅನುದಾನವನ್ನು 2023-24ನೇ ಸಾಲಿನ ಬಜೆಟ್‌ನಲ್ಲಿ ತೆಗೆದಿರಿಸಿ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿತು.
ಆದರೆ, ಸರ್ಕಾರವು ಮಧ್ಯಂತರ ಪರಿಹಾರವನ್ನು 01-07-2022ರಿಂದ ಅನ್ವಯ ಮಾಡದೇ 01-04- 2023ರಿಂದ ಅನ್ವಯ ಆಗುವಂತೆ ಆದೇಶ ಮಾಡುವ ಮೂಲಕ ರಾಜ್ಯದ ನೌಕರರು 9 ತಿಂಗಳ ವೇತನ ಹೆಚ್ಚಳದಿಂದ ವಂಚಿತರಾಗುವಂತೆ ಮಾಡಿರುವುದನ್ನು ಒಕ್ಕೂಟ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ. ರಾಜ್ಯದ ಸರ್ಕಾರಿ ನೌಕರರಿಗೆ ರಚಿಸಲಾಗಿರುವ ವೇತನ ಆಯೋಗದ ಶಿಫಾರಸ್ಸುಗಳ ಜಾರಿಗಾಗಿ 2023-24ನೇ ಸಾಲಿನ ಬಜೆಟ್‌ನಲ್ಲಿ ಅಗತ್ಯವಿರುವ ಅಂದಾಜು 15000 ಕೋಟಿ ರೂಪಾಯಿಗಳನ್ನು ತೆಗೆದಿರಿಸಬೇಕಾಗಿತ್ತು. ಆದರೆ ಮುಖ್ಯಮಂತ್ರಿಯವರು ಅದಕ್ಕಾಗಿ 6000 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಿರುವುದಾಗಿ ಬಜೆಟ್ ಮಂಡನೆಯ ನಂತರ ಹೊರಗೆ ಹೇಳಿದ್ದಾರೆ.