ಬೆಂಗಳೂರು:ಕೊರೊನೋತ್ತರ ಕರ್ನಾಟಕದಲ್ಲಿ ಎಲ್ಲಾ ವಲಯಗಳಲ್ಲಿ ಜೀವನೋತ್ಸಾಹ ತುಂಬುವ ಮೂಲಕ ಭವಿಷ್ಯದ ಕನ್ನಡವನ್ನು ಕಟ್ಟುವ ದೃಷ್ಟಿಯಿಂದ ಸರ್ಕಾರ ನ. 1ರಿಂದ ಅ. 31, 2021ರವರೆಗೆ ಕನ್ನಡ ಕಾಯಕ ವರ್ಷಾಚರಣೆಯನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಈ ಹಿನ್ನೆಲೆ ಕೆಲ ಮಾರ್ಗಸೂಚಿಯನ್ನು ಹೊರಡಿಸಿದ್ದು, ಕಡ್ಡಾಯವಾಗಿ ಜಾರಿಗೊಳಿಸಲು ಸರ್ಕಾರ ಸೂಚಿಸಿದೆ.
ಈ ಸಂಬಂಧ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದು, ಕನ್ನಡವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಆಡಳಿತದ ಎಲ್ಲಾ ವಲಯಗಳಲ್ಲಿ ಕನ್ನಡಪರ ಆದೇಶಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಸೂಚಿಸಿದ್ದಾರೆ. ತಂತ್ರಜ್ಞಾನದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸಲು ಕಾರ್ಯಕ್ರಮಗಳನ್ನು ರೂಪಿಸಲು ನಿರ್ದೇಶಿಸಿದ್ದಾರೆ.
ಇಲಾಖೆಗಳು ರೂಪಿಸುವ ನೀತಿಗಳ ಕರಡುಗಳು ಹಾಗೂ ಅನುಮೋದಿತ ಅಂತಿಮ ನೀತಿಗಳು ಕನ್ನಡದಲ್ಲಿ ಇರಬೇಕು. ತಂತ್ರಜ್ಞಾನ ಆಧಾರಿತ ಆಡಳಿತ ವ್ಯವಸ್ಥೆಯ ಮೂಲಕ ಅರ್ಜಿದಾರರು, ಫಲಾನುಭವಿಗಳು, ಸಾರ್ವಜನಿಕರಿಗೆ ಕಳುಹಿಸಲಾಗುವ ಎಸ್ಎಂಎಸ್, ಇ-ಮೇಲ್ ಮುಂತಾದ ಸಂದೇಶಗಳನ್ನು ಕನ್ನಡದಲ್ಲಿ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಮಾರ್ಗಸೂಚಿಯಲ್ಲೇನಿದೆ?:
* ಸರ್ಕಾರದ ವತಿಯಿಂದ ಆಯೋಜಿಸುವ ದಸರಾ, ಹಂಪಿ, ಕದಂಬ, ಜಿಲ್ಲಾ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಬಂಡವಾಳ ಹೂಡಿಕೆಯ ರಸ್ತೆ ಮೆರವಣಿಗೆಗಳು (ರೋಡ್ ಶೋ) ಮುಂತಾದ ಕಾರ್ಯಕ್ರಮಗಳಲ್ಲಿ ಕಡಾಯವಾಗಿ ಕನ್ನಡ ನಾಡು ನುಡಿ, ನೆಲ ಜಲ, ಸಂಸ್ಕೃತಿಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸುವುದು ಹಾಗೂ ಕನ್ನಡದ ಕಲಾವಿದರಿಗೆ ಪ್ರಾತಿನಿಧ್ಯ ಒದಗಿಸಬೇಕು.
* ಸರ್ಕಾರಿ ಮುದ್ರಣಾಲಯ ಹಾಗೂ ಸರ್ಕಾರಿ ಇಲಾಖೆಗಳು ಮುದ್ರಿಸುವ ತಲೆ ಬರಹಗಳು (ಲೆಟರ್ ಹೆಡ್), ನಮೂನೆಗಳು, ಪೂರಕ ಸಾಮಗ್ರಿಗಳು, ಪ್ರಕಟಣೆಗಳು, ಜಾಹೀರಾತುಗಳಲ್ಲಿ ಕನ್ನಡ ಕಾಯಕ ವರ್ಷಾಚರಣೆ ಕಾರ್ಯಕ್ರಮದ ಲಾಂಛನ ಬಳಸಬೇಕು.
* ಸಮಗ್ರ ಕನ್ನಡ ಅನುಷ್ಠಾನ ಹಾಗೂ ಬಳಕೆಯನ್ನು ಪ್ರೋತ್ಸಾಹಿಸಲು ಆಯಾ ಇಲಾಖೆಗಳು ಕನ್ನಡಕ್ಕೆ ಸಂಬಂಧಿಸಿದ ಮಹತ್ವದ ಮತ್ತು ವಿವಿಧ ವಿಷಯ, ಪದಕೋಶಗಳ (ನಿಘಂಟು) ಸಂಗ್ರಹ ಮಾಡಿ ಡಿಜಿಟಲ್ ಮಾದರಿಯಲ್ಲಿ ತಮ್ಮ ಅಧಿಕೃತ ಜಾಲತಾಣಗಳಲ್ಲಿ ಪ್ರಕಟಿಸಬೇಕು.
* ಕರ್ನಾಟಕ ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಜಾಲತಾಣಗಳು ಹಾಗೂ ಸಾಮಾಜಿಕ ಜಾಲತಾಣಗಳ ಪ್ರಧಾನ ಪುಟಗಳನ್ನು ಕನ್ನಡದಲ್ಲಿ ರೂಪಿಸುವುದು ಮತ್ತು ಒಳಪುಟಗಳ ಮಾಹಿತಿಗಳೆಲ್ಲವೂ ಸಂಪೂರ್ಣ ಕನ್ನಡದಲ್ಲಿ ಇರಬೇಕು.
* ನಾಮಫಲಕ, ಹೆದ್ದಾರಿ ಫಲಕ, ರಸ್ತೆ ಮಾರ್ಗಸೂಚಿಗಳು ಹಾಗೂ ಮೈಲುಗಲ್ಲುಗಳಲ್ಲಿ ಕಡ್ಡಾಯವಾಗಿ ಶುದ್ಧ ಕನ್ನಡವನ್ನು ಬಳಸಲು ಕ್ರಮ ವಹಿಸಬೇಕು.