ಬೆಂಗಳೂರು: ಜಲಮಂಡಳಿಯ ಪ್ರಮುಖ ಆದಾಯ ಮೂಲ ನೀರಿನ ಬಿಲ್. ಕೋಟ್ಯಂತರ ರೂಪಾಯಿ ವ್ಯಯಿಸಿ ಜಲಮಂಡಳಿ ನಿತ್ಯ ರಾಜಧಾನಿಗೆ ಕುಡಿಯುವ ನೀರು ಪೂರೈಸುತ್ತದೆ. ಆದರೆ, ಗ್ರಾಹಕರು ನೀರಿನ ಬಿಲ್ ಪಾವತಿಸದಿರುವುದು ಜಲಮಂಡಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದುರಂತ ಅಂದರೆ ವಿವಿಧ ಸರ್ಕಾರಿ ಇಲಾಖೆಗಳೇ ಕೋಟಿ ಕೋಟಿ ನೀರಿನ ಬಿಲ್ ಬಾಕಿ ಉಳಿಸಿಕೊಂಡಿವೆ.
ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಜಲಮಂಡಳಿ ಭಗೀರಥ ಪ್ರಯತ್ನ ಮಾಡುತ್ತದೆ. ದೂರದ ಕಾವೇರಿ ನದಿಯಿಂದ ನೀರನ್ನು ರಾಜಧಾನಿಗೆ ತರುವುದಕ್ಕಾಗಿ ಕೋಟ್ಯಂತರ ರೂ. ಹಣವನ್ನು ಖರ್ಚು ಮಾಡುತ್ತದೆ. ತಾನು ಪೂರೈಸುವ ನೀರಿಗೆ ಗ್ರಾಹಕರಿಂದ ಪಡೆಯುವ ನೀರಿನ ಬಿಲ್ ಜಲಮಂಡಳಿಯ ಆದಾಯದ ಬಹುಪಾಲು.
ನೀರಿನ ಬಿಲ್ ಪಾವತಿಸದೇ ಜಲಮಂಡಳಿ ಸತಾಯಿಸುತ್ತಿರುವುದು ಸಾರ್ವಜನಿಕರಲ್ಲ, ಸರ್ಕಾರಿ ಇಲಾಖೆಗಳು. ವಿವಿಧ ಇಲಾಖೆಗಳು ಜಲಮಂಡಳಿಗೆ ಬಾಕಿ ಉಳಿಸಿಕೊಂಡಿರುವ ನೀರಿನ ಬಿಲ್ನ ಮೊತ್ತ ಸುಮಾರು ₹ 40.76 ಕೋಟಿ. ಈ ಮೂಲಕ ಜಲಮಂಡಳಿ ಬೊಕ್ಕಸಕ್ಕೆ ತೀವ್ರ ಹೊರೆ ನೀಡುತ್ತಿದೆ.
ನೀರಿನ ಬಿಲ್ ಕಟ್ಟದ ಇಲಾಖೆಗಳ ಮಾಹಿತಿ ಹಲವು ವರ್ಷಗಳಿಂದ ಇಲಾಖೆಗಳು ನೀರಿನ ಬಿಲ್ ಪಾವತಿಸದ ಹಿನ್ನೆಲೆ ಜಲಮಂಡಳಿ ಬಡ್ಡಿಯನ್ನೂ ವಿಧಿಸುತ್ತಿದೆ. ಜಲಮಂಡಳಿ ಭಾರಿ ಪ್ರಮಾಣದಲ್ಲಿ ನಷ್ಟ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಾಕಿ ಬಿಲ್ಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಲಮಂಡಳಿ ಬಿಲ್ ಬಾಕಿ ಉಳಿಸಿರುವ ಇಲಾಖೆಗಳಿಗೆ ನೋಟಿಸ್ ಜಾರಿ ಮಾಡುತ್ತಿದೆ. ಆದರೆ, ಸರ್ಕಾರಿ ಇಲಾಖೆಗಳ ಬಾಕಿ ನೀರಿನ ಬಿಲ್ ಮಾತ್ರ ವರ್ಷಂ ಪ್ರತಿ ಏರುತ್ತಲೇ ಇದೆ.
ಬಾಕಿ ಉಳಿಸಿಕೊಂಡಿರುವ ಬಡ್ಡಿ ಕುರಿತು ಪಟ್ಟಿ ಜಲಮಂಡಳಿ ವಾರ್ಷಿಕ ಸುಮಾರು ₹130 ಕೋಟಿ ಆದಾಯ ಕೊರತೆ ಎದುರಿಸುತ್ತಿದೆ. ಸುಮಾರು ₹ 500 ಕೋಟಿ ರೂಪಾಯಿ ವಿದ್ಯುತ್ ಬಿಲ್ ರೂಪದಲ್ಲಿ ಪಾವತಿಸುತ್ತದೆ. ತನ್ನ ಪ್ರಮುಖ ಆದಾಯ ಸಂಗ್ರಹದಲ್ಲಿ ಸುಮಾರು ಶೇ.80 ನೀರಿನ ಬಿಲ್ ಸಂಗ್ರಹದ ಮೂಲಕ ಬರುತ್ತದೆ. ಪರಿಸ್ಥಿತಿ ಹೀಗಿದ್ದಾಗ ಸರ್ಕಾರಿ ಇಲಾಖೆಗಳೇ ಕೋಟ್ಯಂತರ ರೂಪಾಯಿ ಬಿಲ್ ಬಾಕಿ ಉಳಿಸಿಕೊಂಡಿರುವುದು ವಿಪರ್ಯಾಸವೇ ಸರಿ.