ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಹೊಸದಾಗಿ 243 ವಾರ್ಡ್‌ಗಳನ್ನು ರಚಿಸಿರುವ ಕ್ರಮವನ್ನು ರಾಜ್ಯ ಸರ್ಕಾರ ಹೈಕೋರ್ಟ್ನಲ್ಲಿ ಸಮರ್ಥಿಸಿಕೊಂಡಿದೆ. ವಾರ್ಡ್‌ಗಳ ಮರು ವಿಂಗಡಣೆ ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ವೇಳೆ, ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ಸರ್ಕಾರವು ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ವಿಸ್ತೀರ್ಣ ಹಾಗೂ ಜನಸಂಖ್ಯೆ ಬೆಳವಣಿಗೆಯ ಆಧಾರದಲ್ಲಿ ವಾರ್ಡ್‌ಗಳನ್ನು ರಚಿಸಲಾಗಿದೆ ಎಂದು ತಿಳಿಸಿದೆ.
ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ ವಾದ ಮಂಡಿಸಿ, 2011ರ ಜನಗಣತಿ ಆಧರಿಸಿ ಪ್ರತಿ ವಾರ್ಡ್‌ಗೆ ಜನಸಂಖ್ಯೆ ನಿಗದಿಪಡಿಸಲಾಗಿದೆ. ಅಲ್ಲದೇ ವಿಧಾನಸಭಾ ಕ್ಷೇತ್ರದ ಭೌಗೋಳಿಕ ವಿಸ್ತೀರ್ಣ, ಕ್ಷೇತ್ರದ ಜನಸಂಖ್ಯೆ ಬೆಳವಣಿಗೆ ಆಧರಿಸಿ ವಾರ್ಡ್‌ಗಳನ್ನು ರಚಿಸಲಾಗಿದೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವಾರ್ಡ್ ವಿಂಗಡಣೆಯಲ್ಲಿ ಶೇ.10ರಷ್ಟು ಜನಸಂಖ್ಯೆ ಏರಿಳಿತದ ಅನುಪಾತ ಅನುಸರಿಸಲಾಗಿದೆ.
ಅದರಂತೆ, 34 ಸಾವಿರದಿಂದ 39 ಸಾವಿರ ಜನಸಂಖ್ಯೆಯ ಆಧಾರದಲ್ಲಿ ಬಿಬಿಎಂಪಿ ವಾರ್ಡ್ ವಿಂಗಡಣೆ ಮಾಡಲಾಗಿದೆ. ಕೆಲವು ಕಡೆ ಭೌಗೋಳಿಕ ವಿಸ್ತೀರ್ಣ ಹೆಚ್ಚಿದ್ದು, ಜನಸಂಖ್ಯೆ ಕಡಿಮೆ ಇದೆ. ಇನ್ನೂ ಕೆಲವಡೆ ಭೌಗೋಳಿಕ ವಿಸ್ತೀರ್ಣ ದೊಡ್ಡದಾಗಿದ್ದು, ಜನಸಂಖ್ಯೆ ಕಡಿಮೆ. ವಾರ್ಡ್‌ಗಳ ಮರುವಿಂಗಡಣೆಗೆ 2011ರ ಜನಸಂಖ್ಯೆ ಆಧಾರದಲ್ಲಿ ನ್ಯಾಯೋಚಿತ ಮಾರ್ಗಗಳನ್ನು ಅನುಸರಿಸಲಾಗಿದೆ ಎಂದು ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡರು.