ಕರ್ನಾಟಕ

karnataka

ETV Bharat / state

ನಗರದ ಪ್ರದೇಶಗಳಲ್ಲಿರುವ ಅನಧಿಕೃತ ನಿವೇಶನ ಮತ್ತು ಕಟ್ಟಡಗಳಿಗೆ ಬಿ ಖಾತಾ ನೀಡಲು ಸರ್ಕಾರ ನಿರ್ಧಾರ - B khata to unauthorized sites and buildings

ಸ್ಮಾರ್ಟ್ ಸಿಟಿ ಯೋಜನೆ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

government-decision-to-issue-b-khata-to-unauthorized-sites-and-buildings
ಅನಧಿಕೃತ ನಿವೇಶನ ಮತ್ತು ಕಟ್ಟಡಗಳಿಗೆ ಬಿ ಖಾತಾ ನೀಡಲು ಸರ್ಕಾರ ನಿರ್ಧಾರ

By

Published : Jun 27, 2023, 10:08 PM IST

ಬೆಂಗಳೂರು: ರಾಜ್ಯದ ನಗರ ಪ್ರದೇಶಗಳಲ್ಲಿರುವ ಅನಧಿಕೃತ ನಿವೇಶನ ಮತ್ತು ಕಟ್ಟಡಗಳಿಗೆ ಬಿ ಖಾತಾ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು. ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ರೀತಿ ಬಿ ಖಾತಾ ನೀಡಿದರೆ ಸರ್ಕಾರದ ಬೊಕ್ಕಸಕ್ಕೆ 1100 ಕೋಟಿ ರೂ. ಆದಾಯ ಬರಲಿದೆ. ಬೆಂಗಳೂರು ಹೊರತುಪಡಿಸಿ ರಾಜ್ಯದ ಎಲ್ಲ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಅನಧಿಕೃತ ನಿವೇಶನ ಮತ್ತು ಕಟ್ಟಡಗಳಿಗೆ ಬಿ ಖಾತಾ ನೀಡಿದರೆ ಆಸ್ತಿದಾರರು ಸಾಲ ಪಡೆಯಲು, ಸ್ವತ್ತನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದರು.

ಬಿ ಖಾತಾ ಇಲ್ಲದ ಪರಿಣಾಮವಾಗಿ ರಾಜ್ಯದ ನಗರ ಪ್ರದೇಶಗಳ ಲಕ್ಷಾಂತರ ಮಂದಿ ಪಡಿಪಾಟಲು ಪಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಬಿ ಖಾತಾ ನೀಡಲು ತೀರ್ಮಾನಿಸಲಾಗಿದೆ. ಇದೇ ರೀತಿ ರಾಜ್ಯದ ನಗರ ಪ್ರದೇಶಗಳಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡಗಳನ್ನು 94(ಸಿ) ಅಡಿ ಸಕ್ರಮಗೊಳಿಸುವ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ಹಾಗೆಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ರಚನೆಯಾಗಿರುವ ಸಮಿತಿಯಿಂದ ವರದಿ ಬಂದ ಕೂಡಲೇ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತರುತ್ತೇವೆ. ಅದು ನೀಡುವ ಆದೇಶವನ್ನು ಪಾಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೇ ರೀತಿ ರಾಜ್ಯದ ಹಲವು ನಗರಗಳಲ್ಲಿ ಕೈಗೆತ್ತಿಕೊಂಡಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಕ್ರಮಗಳಾಗಿರುವ ಕುರಿತು ದೂರುಗಳಿದ್ದು, ಈ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಯನ್ನು ತನಿಖೆಗೆ ಒಳಪಡಿಸಲಾಗುವುದು. ಬೆಳಗಾವಿ ಮತ್ತು ತುಮಕೂರು ನಗರಗಳಲ್ಲಿ ಅಕ್ರಮ ನಡೆದಿರುವ ಕುರಿತು ದೂರುಗಳಿದ್ದು ಕಳಪೆ ಕಾಮಗಾರಿಗಳು ನಡೆದಿವೆ ಎಂಬ ಮಾಹಿತಿ ಇದೆ. ಹೀಗಾಗಿ ಇದನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯ ಲೋಪಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಯೋಜನೆಯಲ್ಲಿ ಒಂದು ನಗರದ ಕೆಲವೇ ವಾರ್ಡುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆ ಮೂಲಕ ಅಭಿವೃದ್ಧಿಯಾದ ವಾರ್ಡುಗಳ ಪಕ್ಕದಲ್ಲೇ ಅಭಿವೃದ್ಧಿಯಾಗದ ವಾರ್ಡುಗಳು ಇವೆ. ಹೀಗೆ ಒಂದು ನಗರದ ಕೆಲವೇ ಭಾಗಗಳು ಅಭಿವೃದ್ಧಿಯಾಗಿ ಇನ್ನೂ ಹಲವು ಭಾಗಗಳು ಅಭಿವೃದ್ಧಿಯಾಗದೆ ಹೋದರೆ ಹೇಗೆ?ಎಂದು ಪ್ರಶ್ನಿಸಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯದ ಹಲವು ನಗರಗಳಲ್ಲಿ ಕಾಮಗಾರಿ ಮುಗಿಯುತ್ತಾ ಬಂದಿದ್ದು, ಬಹುತೇಕ ಕೆಲಸ ಪೂರ್ಣವಾಗಿದೆ ಎಂದು ಬಿಲ್ ಪಡೆಯಲಾಗಿದೆ ಎಂದರು.

ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ಸರ್ಕಾರ ಸೂಚನೆ ನೀಡಿದೆ ಎಂಬ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದ ಆರೋಪಗಳು ಕೇಳಿ ಬಂದಿರುವುದರಿಂದ ಸ್ಥಗಿತಕ್ಕೆ ಸೂಚನೆ ನೀಡಲಾಗಿದೆ. ಯೋಜನೆಯಡಿ ಎಲ್ಲೆಲ್ಲಿ ಅವ್ಯವಹಾರ ನಡೆದಿದೆಯೋ ಅದನ್ನು ಮಾತ್ರ ಹೆಚ್ಚಿನ ತನಿಖೆಗೆ ವಹಿಸಿ, ಉಳಿದಂತೆ ಎಲ್ಲ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಲಾಗುವುದು. ಹಲವು ಕಡೆ ಕೆಲಸ ಮಾಡದೆ ಬಿಲ್ಲು ಮಂಜೂರು ಮಾಡಿಕೊಂಡ ಉದಾಹರಣೆಗಳಿವೆ. ಹೀಗಾಗಿ ಅದನ್ನು ಪರಿಶೀಲಿಸಲೇಬೇಕಲ್ಲ?. ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದ್ದು, ಇದನ್ನು ಪರಿಹರಿಸಲು ಖಾಸಗಿ ಬೋರ್ ವೆಲ್ ಗಳನ್ನು ವಶಕ್ಕೆ ಪಡೆಯುವುದಲ್ಲದೆ, ಕೊರತೆ ಇರುವ ಕಡೆ ಟ್ಯಾಂಕರುಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ರಾಜ್ಯದ ಏಳು ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು ಅದನ್ನು ಇದೇ ಮಾರ್ಗದ ಮೂಲಕ ಪರಿಹರಿಸಲಾಗಿದೆ ಎಂದರು.

ಇದನ್ನೂ ಓದಿ:New Text book: ಹೊಸ ಪಠ್ಯ ಪುಸ್ತಕ ಮುದ್ರಣವಾಗಿವೆ, ಅದಷ್ಟು ಬೇಗ ಮಕ್ಕಳಿಗೆ ನೀಡುತ್ತೇವೆ : ಶಿಕ್ಷಣ ಸಚಿವ ಮಧು ಬಂಗಾರಪ್ಪ

ABOUT THE AUTHOR

...view details