ಬೆಂಗಳೂರು:ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಈ ಮುಂಚೆ ಅಧಿಸೂಚನೆ ಹೊರಡಿಸಲು ಮುಂದಾಗಿದ್ದ ಸರ್ಕಾರ ಇದೀಗ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ. ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ಸಿಗಲಿದೆ. ಬಳಿಕ ಬೆಳಗಾವಿ ಅಧಿವೇಶನದಲ್ಲಿ ಈ ಸಂಬಂಧ ಮಸೂದೆ ಮಂಡಿಸಲು ತೀರ್ಮಾನಿಸಲಾಗಿದೆ.
ಎಸ್ಸಿ ಸಮುದಾಯಕ್ಕೆ ಈಗಿರುವ ಶೇ.15ರಿಂದ ಶೇ.17ಕ್ಕೆ ಮೀಸಲಾತಿ, ಎಸ್ಟಿ ಸಮುದಾಯಕ್ಕೆ ಈಗ ಇರುವ ಶೇ.3ರಿಂದ ಶೇ.7ಕ್ಕೆ ಮೀಸಲಾತಿ ಹೆಚ್ಚಿಸಲು ಸಚಿವ ಸಂಪುಟ ಸಬೆಯಲ್ಲಿ ಈಗಾಗಲೇ ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮುಂಚೆ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದರು. ಬರೇ ಸರ್ಕಾರಿ ಆದೇಶದಿಂದ ಮೀಸಲಾತಿ ಹೆಚ್ಚಳಕ್ಕೆ ಕಾನೂನು ತೊಡಕು ಬರುವ ಸಾಧ್ಯತೆ ಇರುವ ಕಾರಣ ಇದೀಗ ಸುಗ್ರೀವಾಜ್ಞೆ ಮೂಲಕ ಮೀಸಲಾತಿ ಹೆಚ್ಚಳ ಸಂಬಂಧ ಕಾನೂನು ತರಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.
ಇದೇ ತಿಂಗಳ 20ರಂದು ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಸರ್ಕಾರ ಗ್ರೀನ್ ಸಿಗ್ನಲ್ ಪಡೆಯಲಿದೆ. ಅಂದೇ ಸಂಪುಟ ಸಭೆ ಬಳಿಕ ಎರಡು ಮೂರು ದಿನಗಳಲ್ಲಿ ಸುಗ್ರೀವಾಜ್ಞೆ ಹೊರಡಿಸಲಿದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಮೀಸಲಾತಿ ಹೆಚ್ಚಳ ಕುರಿತ ವಿಧೇಯಕ ತರಲಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.