ಬೆಂಗಳೂರು: ಲಾಕ್ಹೀಡ್ ಸಂಸ್ಥೆ ತನ್ನ ವಿಸ್ತರಣಾ ಕಾರ್ಯವನ್ನು ಬೆಂಗಳೂರಿನಲ್ಲಿಯೂ ಕೈಗೊಳ್ಳಬೇಕು. ಸಂಸ್ಥೆಯ ವಿಸ್ತರಣಾ ಕಾರ್ಯಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಲಾಕ್ಹೀಡ್ ಮಾರ್ಟಿನ್ ವಾರ್ಷಿಕ ಪೂರೈಕೆದಾರರ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಾಕ್ಹೀಡ್ ಮಾರ್ಟಿನ್ ಕಂಪನಿಯು ಭದ್ರತೆ ಸೇವಾ ವಲಯ ಹಾಗೂ ಏರೋಸ್ಪೇಸ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ತನ್ನ ಕ್ಷೇತ್ರದಲ್ಲಿ ಬರುವ ಎಲ್ಲ ಸವಾಲುಗಳಿಗೆ ಪರಿಹಾರ ನೀಡುತ್ತಾ ಬಂದಿದೆ. ಲಾಕ್ಹೀಡ್ ಕಂಪನಿ ಆಗಾಧ ಅನುಭವ ಹೊಂದಿರುವ ಸಂಸ್ಥೆಯಾಗಿದ್ದು, ಪ್ರಪಂಚದಾದ್ಯಂತ ತನ್ನದೇ ಆದ ಸರಬರಾಜು ಜಾಲ ಹೊಂದಿದೆ ಎಂದರು.
ಲಾಕ್ಹೀಡ್ ಸಂಸ್ಥೆ ಬೆಂಗಳೂರಿನಲ್ಲಿ ಸುಮಾರು 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಸರಬರಾಜು ಜಾಲ ಹೊಂದಿರುವ ಸಂಸ್ಥೆ. ಸಣ್ಣ ಕೈಗಾರಿಕೆಗಳಿಂದ ಹಿಡಿದು ಬೃಹತ್ ಕೈಗಾರಿಕೆಗಳವರೆಗೆ ಇವರ ಸರಬರಾಜು ಜಾಲ ನೆಲೆಗೊಂಡಿದೆ. ಲಾಕ್ಹೀಡ್ ಸಂಸ್ಥೆ ಆಧುನಿಕ ತಂತ್ರಜ್ಞಾನವನ್ನೂ ಸೇರಿದಂತೆ ಸದಾ ವಿಸ್ತರಣೆಯನ್ನು ಕಾಣುವ ಸಂಸ್ಥೆ. ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಕೃತಕ ಬುದ್ಧಿಮತ್ತೆ ವಲಯದಲ್ಲಿಯೂ ಸಂಸ್ಥೆಯ ಪಾತ್ರವನ್ನು ಕಾಣಬಹುದು. ಸ್ಟಾರ್ಟ್ ಅಪ್ ಸೇರಿದಂತೆ ಯಾವುದೇ ಸಂಸ್ಥೆಯವರು ಲಾಕ್ಹೀಡ್ ಸಂಸ್ಥೆಯ ಭಾಗಿಯಾಗಿರುವುದು ಲಾಭದಾಯಕ ಎಂದು ಹೇಳಿದರು.