ಬೆಂಗಳೂರು: ಮನೆ ಬಾಗಿಲಿಗೆ ಸರ್ಕಾರಿ ಸೇವೆ ತಲುಪಿಸುವ ವಿನೂತನ ಜನಸೇವಕ ಯೋಜನೆ ಪುನರಾರಂಭ ಇನ್ನೂ ಸಾಧ್ಯವಾಗಿಲ್ಲ. ಆದರೆ ಇದೀಗ ಸರ್ಕಾರ ಈ ಯೋಜನೆಯನ್ನು ಬೆಂಗಳೂರಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ವಿಸ್ತರಿಸಿ ಹೊಸ ಟಚ್ ಕೊಡಲು ಮುಂದಾಗಿದೆ.
ನಾಗರೀಕರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ತಲುಪಿಸುವ ಉದ್ದೇಶದಿಂದ ಜನಸೇವಕ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಬೆಂಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜಾರಿಯಾಗಿದ್ದ ಈ ಯೋಜನೆಗೆ ಕೊರೊನಾ ಕಡಿವಾಣ ಹಾಕಿತ್ತು. ಇದರ ಜೊತೆಗೆ ತಲೆದೋರಿರುವ ಹಣಕಾಸು ಕೊರತೆಯ ಕಾರಣ ಸರ್ಕಾರ ಯೋಜನೆಯ ಶೀಘ್ರ ಪುನರಾರಂಭಕ್ಕೆ ಒಲವು ತೋರಿಲ್ಲ. ಫೆಬ್ರವರಿಯಲ್ಲಿ ಜನಸೇವಕ ಯೋಜನೆಗೆ ಚಾಲನೆ ನೀಡಲಾಗಿತ್ತು. ರಾಜಾಜಿನಗರ, ಮಹದೇವಪುರ, ಟಿ.ದಾಸರಹಳ್ಳಿ, ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಜನಸೇವಕ ಯೋಜನೆಯನ್ನು ಅಧಿಕೃತವಾಗಿ ಜಾರಿಗೆ ತರಲಾಗಿತ್ತು. ಬಳಿಕ ಕೋವಿಡ್ ನೆಪದಲ್ಲಿ ಜನಸೇವಕ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ.
ವಿನೂತನ ಜನಸೇವಕ ಯೋಜನೆ ಪುನರಾರಂಭ ಕಂದಾಯ, ಪೊಲೀಸ್, ಕಾರ್ಮಿಕ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ಬಿಬಿಎಂಪಿ ಸೇರಿ ಒಟ್ಟು ಆರು ಇಲಾಖೆಗಳ ಒಟ್ಟು 53 ವಿವಿಧ ಸೇವೆಗಳನ್ನು ಜನಸೇವಕ ಯೋಜನೆಯಡಿ ಪೂರೈಸಲಾಗುತ್ತಿದೆ. ಜಾತಿ ಪ್ರಮಾಣ ಪತ್ರ, ಪಿಂಚಣಿ, ಖಾತೆ ಬದಲಾವಣೆ, ಜಾತಿ ಪ್ರಮಾಣಪತ್ರ, ಹಿರಿಯ ನಾಗರಿಕರ ಕಾರ್ಡ್, ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್, ಆದಾಯ ಪ್ರಮಾಣಪತ್ರ, ಮತದಾರರ ಗುರುತಿನ ಚೀಟಿ ಮುಂತಾದ ಸೇವೆಗಳನ್ನು ಜನಸೇವಕರ ಮೂಲಕ ನಿಗದಿತ ಅವಧಿಯಲ್ಲಿ ಮನೆ ಬಾಗಿಲಿಗೆ ಪೂರೈಸಲಾಗುತ್ತದೆ. ನಾಗರೀಕರು ತಮ್ಮ ದಾಖಲೆಗಳ ಶುಲ್ಕದೊಂದಿಗೆ ಪ್ರತಿ ಜನಸೇವಕ ಸೇವೆಗೆ 115 ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕು. ಜನಸೇವಕರು ಮನೆ ಬಾಗಿಲಿಗೆ ಬಂದು ಸೇವೆಯನ್ನು ಪೂರೈಕೆ ಮಾಡುವ ವಿನೂತನ ಯೋಜನೆ ಇದಾಗಿದೆ.
ಎಲ್ಲಾ ಕ್ಷೇತ್ರಗಳಿಗೆ ವಿಸ್ತರಿಸಿ ಯೋಜನೆ ಪುನರಾರಂಭಕ್ಕೆ ಚಿಂತನೆ:
ಕೊರೊನಾದಿಂದಾಗಿ ಏಪ್ರಿಲ್‌ನಿಂದ ಜನಸೇವಕ ಯೋಜನೆಯನ್ನು ನಿಲ್ಲಿಸಲಾಗಿದೆ. ಎಲ್ಲಾ ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಸೇವೆ ಪುನರಾರಂಭಕ್ಕೆ ಸಕಲ ತಯಾರಿಗಳನ್ನು ಮಾಡಲಾಗಿದೆ. ಆದರೆ ಈಗಲೂ ಜನಸೇವಕ ಯೋಜನೆ ಪುನರಾರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
ಇದೀಗ ನಿಧಾನವಾಗಿ ಆರ್ಥಿಕ ಚೇತರಿಕೆ ಕಾಣುತ್ತಿದ್ದು ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ ಹೊಸ ರೂಪ ನೀಡಲು ಸರ್ಕಾರ ನಿರ್ಧರಿಸಿದೆ. ಸದ್ಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಸೀಮಿತವಾಗಿರುವ ಯೋಜನೆಯನ್ನು ಬೆಂಗಳೂರಿನ ಎಲ್ಲಾ 28 ಕ್ಷೇತ್ರಗಳಿಗೆ ವಿಸ್ತರಿಸಿ ಪುನರಾರಂಭಗೊಳಿಸಲು ಮುಂದಾಗಿದೆ.
ಈ ಸಂಬಂಧ ಎಲ್ಲಾ ತಯಾರಿಗಳನ್ನು ಮಾಡಲಾಗುತ್ತಿದ್ದು, ಶೀಘ್ರದಲ್ಲಿ 28 ಕ್ಷೇತ್ರಗಳಿಗೂ ವಿಸ್ತರಿಸಿ ಜನಸೇವಕ ಯೋಜನೆ ಪುನರಾರಂಭಿಸಲಾಗುವುದು ಎಂದು ಸಕಾಲ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬಜೆಟ್‌ನಲ್ಲೂ ಸಿಎಂ ಯಡಿಯೂರಪ್ಪ ಜನಸೇವಕ ಯೋಜನೆಯನ್ನು 28 ಕ್ಷೇತ್ರಗಳಿಗೆ ವಿಸ್ತರಿಸಲಾಗುವುದಾಗಿ ಘೋಷಿಸಿದ್ದರು. ಆದರೆ ಆರ್ಥಿಕ ಕೊರತೆಯಾಗಿದ್ದು ಅದು ಸಾಧ್ಯವಾಗಿರಲಿಲ್ಲ. ಇತ್ತ ಲಾಕ್‌ಡೌನ್ ಬಳಿಕ ಜನಸೇವಕ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಬಜೆಟ್ ನಲ್ಲಿ ಜನಸೇವಕ ಯೋಜನೆ ಮತ್ತು ಸೇವಾ ಸಿಂಧು ಸೇವೆಗಾಗಿ ಕೇವಲ 8 ಕೋಟಿ ರೂ. ಮೀಸಲಿರಿಸಲಾಗಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆ ಹಣಕಾಸು ಇಲಾಖೆ ಹೊಸ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿರಲಿಲ್ಲ. ಆದರೆ ಇದೀಗ ಬೊಕ್ಕಸದ ಮೇಲಿನ ಆರ್ಥಿಕ ಹೊರೆ ತಪ್ಪಿಸಲು ಖಾಸಗಿ ಪಾಲುದಾರಿಕೆಯಡಿ ಜನಸೇವಕ ಯೋಜನೆಯನ್ನು ನಿರ್ವಹಿಸಲು ಸರ್ಕಾರ ಮುಂದಾಗಿದೆ. ಸದ್ಯದಲ್ಲೇ ಹೊಸ ರೂಪದಲ್ಲಿ ಇನ್ನಷ್ಟು ವಿಸ್ತರಿತ ರೂಪದಲ್ಲಿ ಜನಸೇವಕರು ಸಾರ್ವಜನಿಕರ ಮನೆ ಬಾಗಿಲಿಗೆ ಬರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.