ಬೆಂಗಳೂರು: ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ ನುಡಿದಿದ್ದಾರೆ.
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಬಿಜೆಪಿಗೆ 6 ಕ್ಕಿಂತ ಕಡಿಮೆ ಸ್ಥಾನ ಬರಲಿದ್ದು, ಸರ್ಕಾರ ಪತನವಾಗಲಿದೆ. ಆಗ ಮತ್ತೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಬರಬಹುದು. ಒಂದೊಮ್ಮೆ ಬಿಜೆಪಿಯವರು ಆಪರೇಷನ್ ಕಮಲ ಮಾಡಲು ಮುಂದಾದರೆ, ಯಾರೂ ಹೋಗಲ್ಲ. ಸೋಲುವುದಕ್ಕೆ ಯಾರು ಹೋಗುತ್ತಾರೆ. ಸೋಲಿನ ಆತಂಕಕ್ಕೆ ಯಾರೂ ರಾಜೀನಾಮೆ ನೀಡಲ್ಲ. ಈ ಚುನಾವಣೆ ಫಲಿತಾಂಶ ಮುಂದಿನ ದಿನಗಳಲ್ಲಿ ಆಪರೇಷನ್ ಕಮಲ ನಡೆಯಲ್ಲ ಎನ್ನುವುದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ. ಮತ್ತೆ ಮೈತ್ರಿ ಸರ್ಕಾರ ರಚನೆ ಆದರೂ ಆಗಬಹುದು. ಪಕ್ಷದ ನಾಯಕರು ನಿರ್ಧರಿಸುತ್ತಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಯಾರಿಗೂ ವಿರೋಧ ಇಲ್ಲ. ನಾನೂ ಬೆಂಬಲಿಸುತ್ತೇನೆ ಎಂದರು.
ಕೇಂದ್ರದ ವಿರುದ್ಧ ವಾಗ್ದಾಳಿ: ಜನರಿಗೆ ಮೋದಿ ಸರ್ಕಾರದ ಮೇಲಿರುವ ವಿಶ್ವಾಸ ದಿನದಿಂದ ದಿನಕ್ಕೆ ಕಡಿಮೆ ಆಗ್ತಿದೆ. ಜಿಡಿಪಿ 4.5 ಕ್ಕೆ ಕುಸಿದಿದೆ. ಈ ಸರ್ಕಾರಕ್ಕೆ ಆರ್ಥಿಕ ತಜ್ಞರು ಬೇಕಿಲ್ಲ. ಆರ್ಥಿಕ ತಜ್ಞರ ಸಲಹೆ, ಸೂಚನೆಗಳನ್ನು ಪಡೆದಿದ್ದರೆ ದೇಶದ ಆರ್ಥಿಕ ಸ್ಥಿತಿ ಈ ಮಟ್ಟಕ್ಕೆ ಬರ್ತಿರಲಿಲ್ಲ. ಮೋದಿ ಚುನಾವಣೆ ಸಂದರ್ಭದಲ್ಲಿ ನೀಡಿದ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಉದ್ಯೋಗ ಸೃಷ್ಟಿ ಆಗ್ತಿಲ್ಲ, ಉದ್ಯೋಗ ನಷ್ಟ ಹೆಚ್ಚಾಗ್ತಿದೆ. ಜನ ಇವತ್ತು ಹತಾಶೆ ಮನೋಭಾವಕ್ಕೆ ಬಂದಿದ್ದಾರೆ. ರಾಜ್ಯದಲ್ಲಿ ಅತೀವೃಷ್ಟಿ ಉಂಟಾಗಿತ್ತು. ಆದ್ರೆ, ಪ್ರಧಾನಿಗಳು ಒಮ್ಮೆಯೂ ರಾಜ್ಯದ ನೆರೆ ವೀಕ್ಷಣೆ ಮಾಡಲಿಲ್ಲ ಎಂದರು.
ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ: ದೇಶದ ಆರ್ಥಿಕ ಪ್ರಗತಿ ಕುಂಠಿತವಾಗಿದೆ. ಹೊಸ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಕೇಂದ್ರದ ಆರ್ಥಿಕ ನೀತಿಯಿಂದ ಹೊಸ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಹೊರರಾಷ್ಟ್ರದ ಕಂಪನಿಗಳು ಬಂದು ಹೂಡಿಕೆ ಮಾಡುತ್ತಿಲ್ಲ. ಇದರಿಂದಾಗಿ ಇರುವ ಉದ್ಯೋಗ ಕಡಿಮೆ ಆಗುತ್ತಿದೆ. ನೆರೆಗೆ ಸೂಕ್ತ ಪರಿಹಾರ ಕೊಟ್ಟಿಲ್ಲ. ರಾಜ್ಯದಿಂದ 1 ಲಕ್ಷ ಕೋಟಿ ರೂ ತೆರಿಗೆ ಹಣ ಹೋಗುತ್ತೆ. ಅದರಲ್ಲಿ ಪಾಲು ಕೊಡಬಹುದಿತ್ತು. ಆದರೆ ನೀಡಿಲ್ಲ. ಪ್ರಕೃತಿ ವಿಕೋಪಕ್ಕೆ ಹಣ ಮೀಸಲಿಡಲಾಗುತ್ತಿದೆ. ಅದರಲ್ಲಿ ನೀಡಬಹುದಿತ್ತು. ಚುನಾವಣಾ ಅಕ್ರಮ ನಡೆಯುತ್ತಿದೆ. ಗೃಹ ಸಚಿವರ ಕಾರು ತಪಾಸಣೆ ಆಗಿಲ್ಲ, ವಿಜಯೇಂದ್ರ ಕಾರು ತನಿಖೆಗೆ ಬಿಟ್ಟಿಲ್ಲ. ಉಪಮುಖ್ಯಮಂತ್ರಿ ಗೋವಿಂದಕಾರಜೋಳ ಹಣ ಹಂಚಿದ್ದಾರೆ, ಟಿಕೆಟ್ ವಾಪಸ್ ಪಡೆಯಲು ಹಲವು ಅಭ್ಯರ್ಥಿ ಗಳಿಗೆ ಬಲವಂತ ಮಾಡಲಾಗಿದೆ ಈ ರೀತಿ 9 ಪ್ರಕರಣದಲ್ಲಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರೂ ಆಯೋಗ ಕ್ರಮ ಕೈಗೊಂಡಿಲ್ಲ. ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ದೂರಿದರು.