ಬೆಂಗಳೂರು: ಭ್ರಷ್ಟಾಚಾರ ಆರೋಪದಡಿ ಅಮಾನತಿಗೆ ಒಳಗಾಗಿದ್ದ ವಿಧಾನಸಭೆ ಕಾರ್ಯದರ್ಶಿ ಎಸ್ ಮೂರ್ತಿ ಅವರನ್ನು ಮರುನೇಮಕ ಮಾಡುವಂತೆ ತೀರ್ಪು ನೀಡಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದೆ.
ವಿಧಾನಸಭೆ ಕಾರ್ಯದರ್ಶಿ ಹುದ್ದೆಯಿಂದ ಮೂರ್ತಿ ಅವರನ್ನು ಅಮಾನತು ಮಾಡಿ ವಿಧಾನಸಭೆ ವಿಶೇಷ ಮಂಡಳಿ ಹೊರಡಿಸಿದ್ದ ಆದೇಶ ಕಾನೂನು ಬಾಹಿರ ಎಂದು ಜುಲೈ 2 ರಂದು ತೀರ್ಪು ನೀಡಿದ್ದ ನ್ಯಾಯಮೂರ್ತಿ ಭಜಂತ್ರಿ ಅವರಿದ್ದ ಏಕ ಸದಸ್ಯ ಪೀಠ, ಶಿಸ್ತುಕ್ರಮ ವಿಚಾರಣಾ ಸಮಿತಿಯ ಫಲಿತಾಂಶದ ಆಧಾರದ ಮೇಲೆ ಮೂರು ವಾರಗಳಲ್ಲಿ ಮರು ನೇಮಕ ಮಾಡುವಂತೆ ನಿರ್ದೇಶಿಸಿತ್ತು. ಇದೀಗ ರಾಜ್ಯ ಸರ್ಕಾರ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ.
ಸರ್ಕಾರ ತನ್ನ ಮೇಲ್ಮನವಿ ಅರ್ಜಿಯಲ್ಲಿ, ಏಕ ಸದಸ್ಯ ಪೀಠ ತನ್ನ ತೀರ್ಪಿನಲ್ಲಿ ಒಂದೆಡೆ ಅಮಾನತು ಪ್ರಕರಣದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಮತ್ತು ಮೂರ್ತಿ ಅವರ ಅಮಾನತು ಆದೇಶ ವಿಶೇಷ ಮಂಡಳಿಯ ವಿವೇಚನೆಗೆ ಬಿಟ್ಟಿದೆ ಎಂದು ಹೇಳಿದೆ. ಹಾಗೆಯೇ ತಾಂತ್ರಿಕ ಕಾರಣಗಳನ್ನು ನೀಡಿ ಅಮಾನತು ಆದೇಶದಲ್ಲಿ ಮಧ್ಯಪ್ರವೇಶಿಸಿರುವುದಾಗಿ ಹೇಳಿದೆ. ಮೂರ್ತಿ ಅವರಿಗೆ ಒಂದು ವರ್ಷದ ಭತ್ಯೆ ಹಣವನ್ನು ಪಾವತಿಸಲು ನಿರ್ದೇಶಿಸಿದೆ. ಈ ಆದೇಶ ಕಾನೂನು ಬಾಹಿರವಾಗಿದೆ ಎಂದು ಸರ್ಕಾರ ಆರೋಪಿಸಿದೆ.
ಪ್ರಕರಣದ ಹಿನ್ನೆಲೆ :
2016 ಮತ್ತು 2017 ಸಾಲಿನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನ ಸಂಬಂಧಿತ ಖರ್ಚುವೆಚ್ಚಗಳಲ್ಲಿ ಅವ್ಯವಹಾರ ನಡೆಸಿದ ಆರೋಪದಡಿ ವಿಧಾನಸಭೆ ಕಾರ್ಯದರ್ಶಿಯಾಗಿದ್ದ ಮೂರ್ತಿ ಅವರನ್ನು ಶಾಸಕಾಂಗ ವಿಶೇಷ ಮಂಡಳಿಯ ಆದೇಶದ ಮೇರೆಗೆ 2018 ರ ಡಿಸೆಂಬರ್ 27 ರಂದು ಅಮಾನತು ಮಾಡಲಾಗಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಮೂರ್ತಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಜುಲೈ 2ರಂದು ಆದೇಶ ಪ್ರಕಟಿಸಿ ಮೂರ್ತಿ ಮರುನೇಮಕಕ್ಕೆ ಆದೇಶಿಸಿತ್ತು.