ಬೆಂಗಳೂರು: ಡಾ. ರಾಜ್ ಕುಮಾರ್ ಅವರ ಇಡೀ ಕುಟುಂಬ ಸಮಾಜ ಸೇವೆಯ ಜೊತೆಗೆ ಶಿಕ್ಷಣದ ಮೌಲ್ಯಗಳನ್ನು ಹೆಚ್ಚಿಸಲು ರಾಜ್ಕುಮಾರ್ ಅಕಾಡೆಮಿಯನ್ನು ಹುಟ್ಟುಹಾಕಿದೆ. ಇಂತಹ ಸಂಸ್ಥೆಯೊಂದಿಗೆ ನಾವು ಇಂದು ಒಡಂಬಡಿಕೆ ಮಾಡಿಕೊಂಡಿದ್ದು ಬಹಳ ಸಂತಸ ತಂದಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ ನಾಗೇಂದ್ರ ಹೇಳಿದರು.
ವಿಕಾಸಸೌಧದಲ್ಲಿ ಇಂದು ರಾಜ್ಯ ಎನ್ಎಸ್ಎಸ್ ಕೋಶ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಡಾ. ರಾಜ್ಕುಮಾರ್ ಅಕಾಡೆಮಿಯ ನಡುವೆ ಹೊಸ ಒಡಂಬಡಿಕೆ ನಡೆಯಿತು. ಇದರ ಪ್ರಕಾರ, ವಿಶ್ವವಿದ್ಯಾಲಯ / ನಿರ್ದೇಶನಾಲಯಗಳಲ್ಲಿ ಲರ್ನಿಂಗ್ ಆಪ್ ಮತ್ತು ಉಚಿತ ತರಬೇತಿಯನ್ನು ಅನುಷ್ಠಾನಗೊಳಿಸಿ ಯುಪಿಎಸ್ ಸಿ ಮತ್ತು ಕೆ ಪಿ ಎಸ್ ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ನಾಗೇಂದ್ರ, ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯದ 65 ವಿಶ್ವವಿದ್ಯಾಲಯ ಹಾಗೂ 4 ನಿರ್ದೇಶನಾಲಯಗಳ ಸುಮಾರು 6.40ಲಕ್ಷಕ್ಕೂ ಹೆಚ್ಚು ಸ್ವಯಂಸೇವಕ / ಸೇವಕಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಇದು ಸಹಕಾರಿಯಾಗಿದೆ. ಇದರ ಜೊತೆಗೆ ಲರ್ನಿಂಗ್ ಆಪ್ನಿಂದ ಆನ್ಲೈನ್ ಮೂಲಕ ತಮಗೆ ಬೇಕಾದ ಮಾಹಿತಿಯನ್ನು ಪಡೆಯಬಹುದು ಎಂದು ಹೇಳಿದರು.
ನಾಡು ಕಂಡ ನಟ ಡಾ. ರಾಜ್ಕುಮಾರ್ ಅವರು ತಮ್ಮ ನಟನೆ ಮತ್ತು ಸಮಾಜ ಸೇವೆಯಿಂದ ಹೆಸರುವಾಸಿಯಾಗಿದ್ದರು. ಈ ಮೂಲಕ ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿದ್ದರು. ಅದೇ ಮಾರ್ಗದಲ್ಲಿ ಇಡೀ ಕುಟುಂಬ ಸಾಗುತ್ತಿದ್ದು, ಸಮಾಜ ಸೇವೆ ಮಾಡುವ ಉದ್ದೇಶದಿಂದ ಡಾ. ರಾಜ್ಕುಮಾರ್ ಅವರ ಹೆಸರಿನಲ್ಲಿ ಒಂದು ವಿದ್ಯಾವಿಕಾಸ ಸಂಸ್ಥೆಯಲ್ಲಿ ಸ್ಥಾಪಿಸಿದ್ದಾರೆ. ಈ ಸಂಸ್ಥೆಯಿಂದ ಹಲವರು ಐಎಎಸ್ ಮತ್ತು ಐಪಿಎಸ್ ಆಗಿದ್ದಾರೆ. ಇಂತಹ ಸಂಸ್ಥೆಯ ಜೊತೆಗೆ ನಮ್ಮ ಇಲಾಖೆ ಒಡಂಬಡಿಕೆ ಮಾಡಿಕೊಂಡಿದ್ದು ಸಂತೋಷ ತಂದಿದೆ. ನಮ್ಮ ಸರ್ಕಾರ ಸದಾ ಡಾ. ರಾಜ್ ಕುಮಾರ್ ಅಕಾಡೆಮಿ ಮತ್ತು ಕುಟುಂಬ ವರ್ಗದ ಋಣಿಯಾಗಿರುತ್ತದೆ ಎಂದು ಹೇಳಿದರು.
ಡಾ. ರಾಜ್ಕುಮಾರ್ ಅಕಾಡೆಮಿಯ ಮುಖ್ಯಸ್ಥ ರಾಘವೇಂದ್ರ ರಾಜ್ಕುಮಾರ್ ಮಾತನಾಡಿ, ಈಗಾಗಲೇ ನಮ್ಮ ಕುಟುಂಬ ರಾಜ್ಯದ ಎಳುಕೋಟಿ ಜನರ ವಿಶ್ವಾಸ ಗಳಿಸಿದೆ. ಇದೀಗ ನಾವು ಸಮಾಜ ಸೇವೆ ಮಾಡಬೇಕು. ಆದ್ದರಿಂದ ನಮ್ಮ ಇಡೀ ಕುಟುಂಬ ಡಾ. ರಾಜ್ ಕುಮಾರ್ ಅಕಾಡೆಮಿಯ ಮೂಲಕ ಬಡ ಮಕ್ಕಳ/ಬಡ ವಿದ್ಯಾ ಪ್ರತಿಭೆಗಳ ವಿದ್ಯಾವಿಕಾಸಕ್ಕೆ ಮುಂದಾಗಿದೆ. ಈ ಸಂಬಂಧ ಆನ್ಲೈನ್ ಲರ್ನಿಂಗ್ ಆಪ್ ಒಂದನ್ನು ಹೊರತಂದಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರು ರಾಜ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಮಂಜುನಾಥ್ ಪ್ರಸಾದ್, ಕಾರ್ತಿಗೇಯನ್, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್, ರಾಜ್ಯ ಎನ್ಎಸ್ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ, ಡಾ.ರಾಜ್ ಕುಮಾರ್ ಅಕಾಡೆಮಿಯ ರೂಪಾಲಿ, ವಿಶ್ವವಿದ್ಯಾಲಯದ ಕುಲಪತಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ :ಮೈಸೂರು ದಸರಾ -2023.. ಅಂಬಾರಿ ಹೊರುವ ಆನೆಗೆ ಸಿದ್ಧವಾಗುತ್ತಿದೆ ನಮ್ದಾ