ಬೆಂಗಳೂರು: ಸರ್ಕಾರ ನಮ್ಮ ಸಾರಿಗೆ ನೌಕರರಿಗೆ ಅನುಕೂಲ ಆಗೋ ರೀತಿ ಭರವಸೆ ಕೊಟ್ರೆ ಮಾತ್ರ ನಮ್ಮ ನೌಕರರಿಗೆ ಬಸ್ ಓಡಿಸಲು ಹೇಳ್ತೀವಿ ಎಂದು ಕಾರ್ಮಿಕ ಸಂಘಟನೆಗಳ ಮುಖಂಡ ಅನಂತ ಸುಬ್ಬರಾವ್ ಸ್ಪಷ್ಟಪಡಿಸಿದ್ದಾರೆ.
ಕಾರ್ಮಿಕ ಸಂಘಟನೆಗಳ ಮುಖಂಡ ಅನಂತ ಸುಬ್ಬರಾವ್ ಮೊದಲ ಸುತ್ತಿನ ಸಭೆ ಬಳಿಕ ಮಾತನಾಡಿದ ಅವರು, ಸಂಬಳ ಹೆಚ್ಚಳ ವಿಚಾರದಲ್ಲಿ ಸರ್ಕಾರ ನಮಗೆ ಒಪ್ಪುವ ನಿರ್ಧಾರ ಮಾಡಲಿ. ಅಂತಿಮವಾಗಿ ಸಭೆಯಲ್ಲಿ ಸರ್ಕಾರ ತೃಪ್ತಿದಾಯಕ ಉತ್ತರ ಕೊಟ್ರೆ ನಮ್ಮ ನೌಕರರಿಗೆ ಬಸ್ ಓಡಿಸಲು ಹೇಳ್ತೀನಿ. ನಮ್ಮ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಮಾಡುತ್ತಿದ್ದೇವೆ. ವೇತನ ತಾರತಮ್ಯ, ಅಧಿಕಾರಿಗಳ ಕಿರುಕುಳ ಸೇರಿದಂತೆ ಅನೇಕ ಬೇಡಿಕೆಗಳಿವೆ. ಆ ಬಗ್ಗೆ ಸರ್ಕಾರ ಭರವಸೆ ನೀಡಿದರೆ ನಾವು ನಮ್ಮ ಸಂಘಟನೆಗಳಿಗೆ ಮುಷ್ಕರ ಕೈ ಬಿಡಿ ಎಂದು ಹೇಳುತ್ತೇವೆ ಎಂದರು.
ಕೋಡಿಹಳ್ಳಿ ವಿರುದ್ಧ ಕಿಡಿ:
ರೈತ ಮುಖಂಡ ಕೋಡಿಹಳ್ಳಿ ವಿರುದ್ಧ ಅನಂತ ಸುಬ್ಬರಾವ್ ಕಿಡಿಕಾರಿದ್ದಾರೆ. ದೀಪ ಆರೋ ಮುನ್ನ ಜೋರಾಗಿ ಉರಿಯುತ್ತೆ ಎಂದು ಹೇಳುವ ಮೂಲಕ ಕೋಡಿಹಳ್ಳಿ ಚಂದ್ರಶೇಖರ್ಗೆ ತಿರುಗೇಟು ನೀಡಿದ್ದಾರೆ. ನೋಟಿಸ್ ಕೊಡದೆ ಪ್ರತಿಭಟನೆ ಹೇಗೆ ಮಾಡ್ತಾರೆ. ಬಸ್ ಬಂದ್ ಮಾಡಿ ಮುಷ್ಕರ ಮಾಡ್ತಿರೋರು ನಮ್ಮ ಯುನಿಯನ್ ಅವರು ಅಲ್ಲ. ಯಾರೋ ಮೂರನೇಯವರು ಕರೆಕೊಟ್ರು ಅಂತಾ ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಎಷ್ಟು ದಿನ ಪ್ರತಿಭಟನೆ ಮಾಡ್ತಾರೋ ನೋಡೋಣ. ನಾವು ನಮ್ಮ ನೌಕರರ ಹಿತಕ್ಕೋಸ್ಕರ ಇಂದಿನ ಸಭೆಗೆ ಬಂದಿದ್ದೇವೆ. 60 ವರ್ಷಗಳಿಂದ ನಾನು ಯುನಿಯನ್ಗಳನ್ನು ನೋಡಿಕೊಂಡು ಬಂದಿದ್ದೇನೆ. ಕೋಡಿಹಳ್ಳಿ ಜೊತೆ ಮಾತಾಡಿ ಅಂತ ನಾನು ಹೇಳಿಲ್ಲ. ಆದ್ರೆ ಉಳಿದವರ ಅಭಿಪ್ರಾಯ ಅ ರೀತಿ ಇರಬಹುದು. ಸಿಎಂ ನನ್ನ ಜೊತೆ ಮಾತನಾಡಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ರನ್ನ ಏನು ಮಾಡ್ತೀರಾ ಅಂತ ಸಿಎಂ ಕೇಳಿದ್ರು. ನಾವು ಸಭೆಗೆ ಬರ್ತೀವಿ. ಬೇರೆಯವರ ಬಗ್ಗೆ ಗೊತ್ತಿಲ್ಲ ಅಂತ ಹೇಳಿದ್ದೇನೆ ಎಂದು ಸುಬ್ಬರಾವ್ ಸ್ಪಷ್ಟಪಡಿಸಿದರು.
ಓದಿ:ವಾಯವ್ಯ ಸಾರಿಗೆ ಸಂಸ್ಥೆ ನೌಕರರಿಗೆ ವೇತನ ನೀಡಿ.. ಹೆಚ್.ವಿ. ಅನಂತ ಸುಬ್ಬರಾವ್ ಆಗ್ರಹ
ಕೋಡಿಹಳ್ಳಿ ನಿಮ್ಮನ್ನ ಹೈಜಾಕ್ ಮಾಡ್ತಿದ್ದಾರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅನಂತ್ ಸುಬ್ಬರಾವ್ ಅವರನ್ನು ಹೈಜಾಕ್ ಮಾಡಬಹುದು. ಆದರೆ ನೌಕರರ ಫೆಡರೇಷನ್ ನ್ನು ಹೈಜಾಕ್ ಮಾಡಲು ಸಾಧ್ಯವಿಲ್ಲ. ರಾತ್ರೋರಾತ್ರಿ ಬಂದ್ಗೆ ಕರೆ ಕೊಡೋದು ಸರಿನಾ? ಎಂದು ಸುಬ್ಬರಾವ್ ಕಿಡಿಕಾರಿದ್ರು.