ಬೆಂಗಳೂರು:ಸತತ ನಾಲ್ಕನೇ ದಿನ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಸನ್ನ ಹೆಗ್ಗೋಡು ಅವರ ಬಳಿ ರಾಜ್ಯ ಸರ್ಕಾರ ಇಲ್ಲಿಯವರೆಗೆ ಮನವಿ ಆಲಿಸಲು ಬಂದಿಲ್ಲ. ಆದರೆ ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಪೊಲೀಸರು ಇಂದು ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸಿದರು ಎಂದು ಗ್ರಾಮ ಸೇವಾ ಸಂಘ ಆರೋಪಿಸಿದೆ.
ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಪ್ರಸನ್ನರ ಉಪವಾಸ ಸತ್ಯಾಗ್ರಹ ನಿಲ್ಲಿಸಲು ಮುಂದಾಯ್ತಾ ಸರ್ಕಾರ?
ಸತತ ನಾಲ್ಕು ದಿನದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರ ಉಪವಾಸವನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿದೆ ಎಂದು ಗ್ರಾಮ ಸೇವಾ ಸಂಘ ಆರೋಪಿಸಿದೆ.
ಇಂದು ರಾತ್ರಿ 9:30ರ ವೇಳೆಗೆ ಪ್ರಸನ್ನ ಅವರ ಆರೋಗ್ಯ ಸ್ಥಿರವಾಗಿಯೇ ಇತ್ತು. ಆದರೂ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಬೇಕೆಂದು ಆ್ಯಂಬುಲೆನ್ಸ್, ಸ್ಟ್ರೆಚರ್ ತಂದು ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಿದರು. ಆದರೆ ಮೊದಲು ಅರೆಸ್ಟ್ ಮಾಡಿ ಆಮೇಲೆ ಇಲ್ಲಿಂದ ಕರೆದೊಯ್ಯಿರಿ ಎಂದು ಪ್ರಸನ್ನ ಅವರು ಆಗ್ರಹಿಸಿದ ಮೇಲೆ ಪೊಲೀಸರು ಹಿಂದೆ ಸರಿದರು ಎನ್ನಲಾಗಿದೆ. ಅಲ್ಲದೆ ಜೆಡಿಎಸ್ ಮುಖಂಡ ವೈಎಸ್ವಿ ದತ್ತಾ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಿದ ಮೇಲೆ, ಉಪವಾಸ ಸತ್ಯಾಗ್ರಹ ಮುಂದುವರಿಸಲು ಅನುವು ಮಾಡಿಕೊಟ್ಟರು ಎಂದು ಗ್ರಾಮ ಸೇವಾ ಸಂಘ ತಿಳಿಸಿದೆ.
ಅಕ್ಟೋಬರ್ 2 ಗಾಂಧಿ ಜಯಂತಿಯ ದಿನದಿಂದ ಬೆಂಗಳೂರಿನ ವಲ್ಲಭ ನಿಕೇತನದಲ್ಲಿ ಪವಿತ್ರ ಆರ್ಥಿಕತೆಗಾಗಿ ಆಗ್ರಹಿಸಿ ಪ್ರಸನ್ನ ಸತ್ಯಾಗ್ರಹ ಆರಂಭಿಸಿದ್ದಾರೆ. ಸತ್ಯಾಗ್ರಹವನ್ನು ತೀವ್ರಗೊಳಿಸಿದ ಅವರು, ಅಕ್ಟೊಬರ್ 6ರಿಂದ ಅಮರಣಾಂತ ಉಪವಾಸವನ್ನೂ ಆರಂಭಿಸಿದ್ದಾರೆ.ಜನಸಾಮಾನ್ಯರಲ್ಲಿ ಮಾರಕ ಆರ್ಥಿಕತೆಯ ಕುರಿತು ಅರಿವು ಮೂಡಿಸುವ ಹಾಗೂ ಆಳುವ ವರ್ಗವನ್ನು ಎಚ್ಚರಿಸುವ ನಿಟ್ಟಿನಲ್ಲಿ ಸತ್ಯಾಗ್ರಹ ನಡೆಸುತ್ತಿದ್ದಾರೆ.