ಬೆಂಗಳೂರು: ನಗರದಲ್ಲಿ ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಈ ಸಂಬಂಧ ಲಸಿಕೆ ನೀಡಲು ಹೆಚ್ಚು ತಂಡಗಳನ್ನು ನಿಯೋಜನೆ ಮಾಡಿಕೊಂಡು ವಿಶೇಷ ಲಸಿಕಾಕರಣ ಅಭಿಯಾನವನ್ನು ಕೋವಿಡ್ ನಿಯಮಾವಳಿಯನ್ನು ಪಾಲಿಸಿ ಯಶಸ್ವಿಗೊಳಿಸಬೇಕು ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ "ವಿಶೇಷ ಲಸಿಕಾಕರಣ ಅಭಿಯಾನ" ನಡೆಸುವ ಸಂಬಂಧ ವರ್ಚುವಲ್ ಮೂಲಕ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆಯಾ ವಲಯಗಳಲ್ಲಿ ಮೈಕ್ರೋಪ್ಲಾನ್ ಮಾಡಿಕೊಂಡು ಅರ್ಹ ಫಲಾನುಭವಿಗಳಿಗೆ ಲಸಿಕೆ ನೀಡಬೇಕು. ಲಸಿಕೆ ನೀಡಲು ಹೆಚ್ಚು ಕ್ಯಾಂಪ್ಗಳನ್ನು ಮಾಡಿಕೊಂಡು ಅದಕ್ಕೆ ಬೇಕಾದಂತಹ ತಂಡಗಳನ್ನು ನಿಯೋಜನೆ ಮಾಡಿಕೊಂಡು ಹೆಚ್ಚು ಲಸಿಕಾಕರಣ ಆಗುವಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಲಸಿಕೆ ನೀಡುವ ಸ್ಥಳದ ಬಗ್ಗೆ ಸ್ಥಳೀಯರಿಗೆ ಮಾಹಿತಿ ನೀಡಬೇಕು. ಲಸಿಕೆ ನೀಡುವ ಸ್ಥಳಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಲಸಿಕೆ ನೀಡುವ ಸ್ಥಳದಲ್ಲಿ ಮಾರ್ಷಲ್ಗಳನ್ನು ನಿಯೋಜನೆ ಮಾಡಲಾಗುವುದು. ಲಸಿಕಾಕರಣ ನಡೆಯುವ ವೇಳೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳು, ಗಾರ್ಮೆಂಟ್ಸ್ಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಕ್ಯಾಬ್-ಆಟೋ ಚಾಲಕರು, ಎಪಿಎಂಸಿ ಮಾರುಕಟ್ಟೆಯಲ್ಲಿನ ವರ್ತಕರು, ಬ್ಯಾಂಕ್ ಸಿಬ್ಬಂದಿ, ಹೋಟೆಲ್ ಸಿಬ್ಬಂದಿ, ಕಟ್ಟಡ ಕಾರ್ಮಿಕರು ಸೇರಿದಂತೆ ಇನ್ನಿತರೆ ಕಡೆ ಕ್ಯಾಂಪ್ ಗಳನ್ನು ಮಾಡಿ ಲಸಿಕೆ ನೀಡಬೇಕು. ಎಲ್ಲಿಯೂ ಯಾವುದೇ ಸಮಸ್ಯೆಯಾಗದಂತೆ ಯಶಸ್ವಿಯಾಗಿ ಅಭಿಯಾನ ನಡೆಯಬೇಕೆಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭಾರತ ಸರ್ಕಾರದ ನಿರ್ದೇಶನದಂತೆ, ರಾಜ್ಯಾದ್ಯಂತ ನಾಳೆ ಲಸಿಕಾಕರಣ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಪೈಕಿ 45 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, 2ನೇ ಡೋಸ್ಗೆ ಬಾಕಿ ಇರುವ ಫಲಾನುಭವಿಗಳ ಲಸಿಕಾಕರಣ, ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರ ಲಸಿಕಾಕರಣ, 18 ರಿಂದ 44 ವರ್ಷ ವಯೋಮಾನದವರ ಸರ್ಕಾರ ಗುರುತಿಸಿರುವ ಅರ್ಹ ಫಲಾನುಭವಿಗಳು ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಸೇವೆ ಸಲ್ಲಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಲಸಿಕಾಕರಣ ನೀಡಲು ಸರ್ಕಾರ ನಿರ್ದೇಶಿಸಿದ್ದು, ಅದರಂತೆ ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗುವುದು. ಅಲ್ಲದೇ ಕೊವ್ಯಾಕ್ಸಿನ್ ಲಸಿಕೆಯು ಲಭ್ಯವಿದ್ದು, ಇಚ್ಚೆಯಿರುವವರಿಗೆ 45 ವರ್ಷ ಮೀರಿದ ವಯೋಮಾನದವರೆಗೆ ಮೊದಲನೇ ಡೋಸ್ ಕೋವ್ಯಾಕ್ಸಿನ್ ಲಸಿಕಾಕರಣ ನೀಡಲಾಗುವುದು ಎಂದು ತಿಳಿಸಿದರು.