ಬೆಂಗಳೂರು: ಗೂಡ್ಸ್ ವಾಹನಗಳನ್ನ ಕಳ್ಳತನ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳನನ್ನ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಗೂಡ್ಸ್ ವಾಹನ ಕಳ್ಳತನ: ಅಂತರ್ ರಾಜ್ಯ ಕಳ್ಳನ ಬಂಧನ - ಅಂತರಾಜ್ಯ ಕಳ್ಳನ ಬಂಧನ
ಗೂಡ್ಸ್ ವಾಹನಗಳನ್ನ ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ಸೇಲಂ ಜಿಲ್ಲೆಯ ಓಮಲೂರಿನ ಶರವಣನ್ (43) ಎಂಬಾತನನ್ನ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡಿನ ಸೇಲಂ ಜಿಲ್ಲೆಯ ಓಮಲೂರಿನ ಶರವಣನ್ (43) ಬಂಧಿತ ಆರೋಪಿ. ಈತ 10ನೇ ತರಗತಿ ವ್ಯಾಸಂಗ ಮಾಡಿದ್ದು, ವೃತ್ತಿಯಲ್ಲಿ ಡ್ರೈವರ್ ಆಗಿದ್ದ. ಆದರೆ ಬೆಂಗಳೂರಿಗೆ ಬಂದ ಬಳಿಕ ಹಣದ ಆಸೆಗೆ ಬಿದ್ದಿದ್ದ ಶರವಣನ್, ಗೂಡ್ಸ್ ವಾಹನ ಕಳ್ಳತನಕ್ಕೆ ಇಳಿದಿದ್ದ. ಅದೇ ರೀತಿ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ನಾಗೇಶ್ ಕುಮಾರ್ ಎಂಬುವವರಿಗೆ ಸೇರಿದ ಗೂಡ್ಸ್ ವಾಹನವನ್ನ ಕಳ್ಳತನ ಮಾಡಿ, ತಮಿಳುನಾಡಿಗೆ ಕೊಂಡೊಯ್ದಿದ್ದಾನೆ. ಕೆಲ ದಿನಗಳ ಬಳಿಕ ಮತ್ತೆ ಬೆಂಗಳೂರಿಗೆ ಆಗಮಿಸಿ, ಕದ್ದ ವಾಹನದಲ್ಲಿ ಕಡಿಮೆ ಬೆಲೆಗೆ ಅಕ್ಕಿ ಖರೀದಿ ಮಾಡಿ ಮಾರಾಟ ಮಾಡುವಾಗ ಅತ್ತಿಬೆಲೆ ಬಳಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಈ ಹಿಂದೆ ಶರವಣನ್ನನ್ನ ಬೊಮ್ಮನಹಳ್ಳಿ ಪೊಲೀಸರು ವಾಹನ ಕಳ್ಳತನ ಆರೋಪದಡಿ ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಹೊರ ಬಂದ ಈತ ಮತ್ತೆ ಅದೇ ಕಾಯಕ ಮುಂದುವರೆಸಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಈತ ನಗರ ಮಾತ್ರವಲ್ಲದೆ, ತಮಿಳುನಾಡಿನ ಕೃಷ್ಣಗಿರಿ, ಸೇಲಂ, ಧರ್ಮಪುರಿ ಸೇರಿದಂತೆ ವಿವಿಧ ಕಡೆ ಕಳ್ಳತನ ನಡೆಸಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬನಶಂಕರಿ ಪೊಲೀಸರು ತಿಳಿಸಿದ್ದಾರೆ.