ಬೆಂಗಳೂರು: 2023 ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ ಹಾಗೂ 2023ನೇ ಸಾಲಿನ ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣಾ) (ತಿದ್ದುಪಡಿ) ವಿಧೇಯಕಗಳು ವಿಧಾನಸಭೆಯಲ್ಲಿ ಇಂದು ಅಂಗೀಕಾರಗೊಂಡವು.
ಸರಕು ಸೇವೆ ತೆರಿಗೆ ಸೋರಿಕೆ ತಡೆಗೆ ಪ್ರಯತ್ನ: ಶಾಸನ ರಚನಾ ಕಲಾಪದಲ್ಲಿ ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಪರ್ಯಾಲೋಚಿಸಿ ಹಲವು ಸದಸ್ಯರು ಚರ್ಚಿಸಿದ ನಂತರ ಸದನದಲ್ಲಿ ಧ್ವನಿಮತದ ಅಂಗೀಕಾರ ದೊರೆಯಿತು. ವಿಧೇಯಕರ ಬಗ್ಗೆ ಮಾತನಾಡಿದ ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು, ರಾಜ್ಯದಲ್ಲಿ ಸರಕು ಸೇವೆ ತೆರಿಗೆ ಸೋರಿಕೆ ತಡೆಗೆ ಪ್ರಯತ್ನಿಸಲಾಗುವುದು. ಜಲ್ಲಿ ಕ್ರಷರ್, ಅಡಕೆ, ಸಿಮೆಂಟ್ ಸೇರಿದಂತೆ ಎಲ್ಲೆಲ್ಲಿ ತೆರಿಗೆ ಸೋರಿಕೆಯಾಗುತ್ತಿದೆಯೋ, ಅದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ದೇಶದಲ್ಲಿ ಅತಿ ಹೆಚ್ಚು ಜಿಎಸ್ಟಿ ಪಾವತಿಸುವ ರಾಜ್ಯ:2017-18ನೇ ಸಾಲಿನಲ್ಲಿ 44,816 ಕೋಟಿ ಇದ್ದ ರಾಜ್ಯದ ಜಿ ಎಸ್ಟಿ ಪಾಲು 2022-23ನೇ ಸಾಲಿನಲ್ಲಿ 81,848 ಕೋಟಿ ರೂ.ಗೆ ಹೆಚ್ಚಾಗಿದೆ. ದೇಶದಲ್ಲಿ ಅತಿ ಹೆಚ್ಚು ಜಿಎಸ್ಟಿ ಪಾವತಿಸುವ ರಾಜ್ಯ ನಮ್ಮದಾಗಿದೆ ಎಂದು ಹೇಳಿದ ಅವರು, ತಿದ್ದುಪಡಿ ವಿಧೇಯಕದಲ್ಲಿ 22 ತಿದ್ದುಪಡಿಗಳಿದ್ದು ಆರು ವರ್ತಕ ಸ್ನೇಹಿಯಾಗಿದೆ. 16 ಸುಗಮ ತೆರಿಗೆ ಅನುಸರಣ ಉಪಕ್ರಮಗಳಿವೆ. ವರ್ತಕ ಸ್ನೇಹಿ ಉಪಕ್ರಮದಲ್ಲಿ ಇ - ಕಾಮರ್ಸ್ ಮೂಲಕ ಸರಕು ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ವಿಳಂಬ ಮರುಪಾವತಿಗೆ ಬಡ್ಡಿ ಲೆಕ್ಕಾಚಾರ ಮಾಡುವ ಸರಳೀಕರಣ ಮಾಡಲಾಗಿದೆ. ಜಿಎಸ್ಟಿ ಪರಿಷತ್ ನಲ್ಲಿ ಆಗಿರುವ ಚರ್ಚೆಗಳ ಹಿನ್ನೆಲೆಯಲ್ಲಿ ವರ್ತಕರಿಗೆ ಸಹಾಯಕವಾಗುವ ರೀತಿಯಲ್ಲಿ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.