ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಲು ನಗರ ಸಂಚಾರ ಇಲಾಖೆ ಮುಂದಾಗಿದೆ. ಅಂತೆಯೇ ಶನಿವಾರದಿಂದ ಒಂದು ತಿಂಗಳ ಕಾಲ ಸಾದಹಳ್ಳಿ ಗೇಟ್ನಿಂದ ಹೆಬ್ಬಾಳ ಮೇಲ್ಸೇತುವೆವರೆಗೂ ಪ್ರತಿದಿನ ಬೆಳಗ್ಗೆ 8.30ರಿಂದ 10.30ವರೆಗೆ ಸರಕು ಸೇವಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ ಗೂಡ್ಸ್ ವಾಹನಗಳನ್ನ ನಿಷೇಧಿಸಲಾಗಿದ್ದು, ನಾಳೆಯಿಂದ ಈ ಆದೇಶ ಜಾರಿ ಬರಲಿದೆ ಎಂದು ಸಂಚಾರ ವಿಭಾಗದ ವಿಶೇಷ ಆಯುಕ್ತ ಡಾ.ಎಂ.ಸಲೀಂ ತಿಳಿಸಿದ್ದಾರೆ.
ಹೆಬ್ಬಾಳ, ಯಲಹಂಕ, ಚಿಕ್ಕಜಾಲ, ಮುಂತಾದ ಪದೇಶಗಳಲ್ಲಿ ಕೈಗಾರಿಕೆಗಳು, ವಾಣಿಜ್ಯೋದ್ಯಮಗಳು ಕ್ಷಿಪ್ರವಾಗಿ ತಲೆಯೆತ್ತಿದ್ದು, ಈ ಪ್ರದೇಶದಲ್ಲಿ ಜನಸಂಖ್ಯೆಯೂ ಹೆಚ್ಚುತ್ತಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿ ದಿನ ಸಾವಿರಾರು ಜನರು ಆಗಮಿಸಿ ರಸ್ತೆಯ ಮೂಲಕವೇ ನಗರ ತಲುಪುವುದು ಅನಿವಾರ್ಯವಾಗಿದೆ. ಅಲ್ಲದೇ ಬೆಂಗಳೂರು ನಗರಕ್ಕೆ ಗಣ್ಯ ಮತ್ತು ಅತಿಗಣ್ಯ ವ್ಯಕ್ತಿಗಳು ಭೇಟಿ ನೀಡುವುದು ಸರ್ವೇ ಸಾಮಾನ್ಯವಾಗಿದ್ದು, ದೈನಂದಿನ ಸಂಚಾರ ನಿರ್ವಹಣೆಯೊಂದಿಗೆ ಗಣ್ಯ ವ್ಯಕ್ತಿಗಳ ಸುಗಮ ಸಂಚಾರಕ್ಕೆ ಅನುವು ಮಾಡುವುದು ಸಂಚಾರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
ರಾಷ್ಟ್ರೀಯ ಹೆದ್ದಾರಿ-7ರಲ್ಲಿ ಬೆಳಗ್ಗೆ ವಾಹನ ಸಂಚಾರ ದಟ್ಟಣೆ ಅಧಿಕವಾಗಿದ್ದು, ಸಾದಹಳ್ಳಿ ಜಂಕ್ಷನ್ನಿಂದ ಹೆಬ್ಬಾಳ ಫ್ಲೈಓವರ್ ವರೆಗೆ ಪ್ರತಿದಿನ ಬೆಳಿಗ್ಗೆ 8:30 ಗಂಟೆಯಿಂದ ಬೆಳಗ್ಗೆ 10.30 ಗಂಟೆಯ ವರೆಗೆ ಎಲ್ಲಾ ರೀತಿಯ ಸರಕು ಸಾರಿಗೆ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
(ಓದಿ: '3 ವರ್ಷ ಡೇಟಿಂಗ್ ಮಾಡಿ ಟ್ರಾಫಿಕ್‌ನಲ್ಲಿ ಸಿಕ್ಕವಳ ಮದ್ವೆಯಾದೆ! ಬೆಂಗಳೂರಿನ ಫ್ಲೈಓವರ್ ಕೆಲಸ ಮಾತ್ರ ಹಾಗೇ ಇದೆ!')