ಕರ್ನಾಟಕ

karnataka

ETV Bharat / state

ನಮ್ಮ ಬೆಂಗಳೂರು ಕಂಬಳಕ್ಕೆ ಉತ್ತಮ ಸ್ಪಂದನೆ: ಅಶೋಕ್‌ ಕುಮಾರ್‌ ರೈ - Bengaluru Kambala winners

Namma Kambala Bengaluru Kambala: ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಬೆಂಗಳೂರು ಕಂಬಳದಲ್ಲಿ ಭಾಗವಹಿಸಿದ್ದ ಕೋಣಗಳ ಮಾಲೀಕರು ಹಾಗೂ ಕಂಬಳ ಕ್ರೀಡೆ ಆಸಕ್ತರಿಗೆ ಕಂಬಳ ಸಮಿತಿ ಅಧ್ಯಕ್ಷ ಕೆ.ಎಸ್‌. ಅಶೋಕ್‌ ಕುಮಾರ್‌ ರೈ ಧನ್ಯವಾದ ಹೇಳಿದ್ದಾರೆ.

Bengaluru Kambala winners
ಬೆಂಗಳೂರು ಕಂಬಳ ವಿಜೇತರು

By ETV Bharat Karnataka Team

Published : Nov 27, 2023, 10:55 PM IST

ಬೆಂಗಳೂರು: ಬೆಂಗಳೂರು ಕಂಬಳ ಸಮಿತಿಯು ಹಮ್ಮಿಕೊಂಡಿದ್ದ ನಮ್ಮ ಕಂಬಳ ಬೆಂಗಳೂರು ಕಂಬಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಮ್ಮ ಕರೆಯೋಲೆಗೆ ಓಗೊಟ್ಟು ಕಂಬಳದಲ್ಲಿ ಭಾಗವಹಿಸಿದ ಎಲ್ಲ ಕೋಣಗಳ ಮಾಲೀಕರಿಗೂ ಧನ್ಯವಾದ ಸಮರ್ಪಿಸುತ್ತೇನೆ ಎಂದು ಕಂಬಳ ಸಮಿತಿ ಅಧ್ಯಕ್ಷ ಕೆ.ಎಸ್‌. ಅಶೋಕ್‌ ಕುಮಾರ್‌ ರೈ ಹೇಳಿದ್ದಾರೆ.

ಕಂಬಳ ಸಂಪನ್ನಗೊಂಡಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಂಬಳದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ಖುಷಿ ಇದೆ. ಎಲ್ಲರ ಸಹಕಾರದಿಂದ ಈ ಕಂಬಳ ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ಕಂಬಳ ನೋಡಲು ಬಂದವರ ಉತ್ಸಾಹ ಕಂಡು ಸಂತಸವಾಯಿತು. ಇತಿಹಾಸದಲ್ಲೇ ಮೊದಲ ಬಾರಿ ಕರಾವಳಿಯನ್ನು ಹೊರತುಪಡಿಸಿ ನಡೆದ ಅದ್ಧೂರಿ ಬೆಂಗಳೂರು ಕಂಬಳ ಸೋಮವಾರ ಮುಂಜಾನೆ 4 ಗಂಟೆವರೆಗೂ ಸ್ಪರ್ಧೆಗಳು ನಡೆದು, 2 ಗಂಟೆ ಸುಮಾರಿಗೆ ಸಂಪನ್ನಗೊಂಡಿದೆ ಎಂದು ಹೇಳಿದರು.

ಬೆಂಗಳೂರು ಕಂಬಳ ವಿಜೇತರು

ಶನಿವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಕೋಣಗಳ ಓಟ ಭಾನುವಾರ ರಾತ್ರಿ ಮೀರಿ ಸೋಮವಾರ ಮುಂಜಾನೆ 4 ಗಂಟೆಗೆ ಅಂತ್ಯಗೊಂಡಿದ್ದು, ಫಲಿತಾಂಶ ಪ್ರಕಟಗೊಂಡಿದೆ. ಜತೆಗೆ ಎರಡೂ ದಿನಗಳಲ್ಲಿ ಅರಮನೆ ಮೈದಾನದಲ್ಲಿ ಕಾಲಿಡಲೂ ಜಾಗವಿಲ್ಲದಂತೆ ಕಂಬಳ ಅಭಿಮಾನಿಗಳು ನೆರೆದಿದ್ದು, ಈ ಮೂಲಕ ಹೊಸ ಚರಿತ್ರೆಯನ್ನೇ ಬರೆಯಲಾಗಿದೆ. 159 ಜೋಡಿ ಕೋಣಗಳು ಭಾಗವಹಿಸಿದ ಈ ಮಹಾ ಕೂಟದಲ್ಲಿ (ರಾಜ-ಮಹಾರಾಜ ಕಂಬಳ) ಅತ್ಯಂತ ಪ್ರತಿಷ್ಠೆಯ ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಸಿ ಕೋಣಗಳು ಪ್ರಥಮ ಬಹುಮಾನ ಪಡೆದರೆ ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಅವರ ಕೋಣಗಳು ದ್ವಿತೀಯ ಬಹುಮಾನ ಪಡೆದಿವೆ ಎಂದರು.

ಶ್ರೀಕಾಂತ್‌ ಭಟ್‌ ಅವರ ಕೋಣಗಳನ್ನು ಬಂಬ್ರಾಣ ಬೈಲು ವಂದಿತ್‌ ಶೆಟ್ಟಿ ಅವರು ಓಡಿಸಿದ್ದಾರೆ. ಈ ಕೋಣಗಳು 9.51 ಸೆಕೆಂಡ್‌ನಲ್ಲಿ ಓಟವನ್ನು ಮುಗಿಸಿವೆ. ಇದು ಕೂಟ ದಾಖಲೆಯಾಗಿದೆ. ಮತ್ತು ಈ ಹಿಂದಿನ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ಈ ಹಿಂದೆ ಬಜಗೋಳಿ ಜೋಗಿಬೆಟ್ಟು ನಿಶಾಂತ್‌ ಶೆಟ್ಟಿ ಅವರು 9.51 ಸೆಕೆಂಡ್‌ನಲ್ಲಿ ಓಟವನ್ನು ಮುಗಿಸಿದ್ದರು ಎಂದು ತಿಳಿಸಿದರು.

ಎರಡು ದಿನಗಳಲ್ಲಿ ಬರೋಬ್ಬರಿ ಎಂಟು ಲಕ್ಷಕ್ಕೂ ಅಧಿಕ ಜನ ಆಗಮಿಸಿ ಕರಾವಳಿಯ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಂಡಿದ್ದಾರೆ. ಈ ಯಶಸ್ಸಿನ ಬೆನ್ನಲ್ಲೇ ಕಂಬಳವನ್ನು ಪ್ರತಿ ವರ್ಷ ರಾಜಧಾನಿಯಲ್ಲಿ ನಡೆಸುವ ಹಾಗೂ ಮುಂದೆ ಮುಂಬೈನಲ್ಲೂ ಆಯೋಜಿಸುವ ಆಶಯ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

ಅಂತಿಮ ಫಲಿತಾಂಶ‌‌: ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ: 159

  • ಕನೆಹಲಗೆ: 7 ಜೊತೆ
  • ಅಡ್ಡಹಲಗೆ: 6 ಜೊತೆ
  • ಹಗ್ಗ ಹಿರಿಯ: 21 ಜೊತೆ
  • ನೇಗಿಲು ಹಿರಿಯ: 32 ಜೊತೆ
  • ಹಗ್ಗ ಕಿರಿಯ: 31 ಜೊತೆ
  • ನೇಗಿಲು ಕಿರಿಯ: 62 ಜೊತೆ

ಬಹುಮಾನ ಎಷ್ಟು:ಈ ಕೂಟದಲ್ಲಿ ಪ್ರಥಮ ಪ್ರಶಸ್ತಿ ಗೆದ್ದವರಿಗೆ 16 ಗ್ರಾಂ ಚಿನ್ನ ಮತ್ತು 1 ಲಕ್ಷ ರೂ. ನಗದು ಬಹುಮಾನ, ದ್ವಿತೀಯ ಪ್ರಶಸ್ತಿ ಗೆದ್ದವರಿಗೆ 8 ಗ್ರಾಂ ಚಿನ್ನ ಮತ್ತು 50 ಸಾವಿರ ರೂ. ಬಹುಮಾನ, ಮೂರನೇ ಬಹುಮಾನವಾಗಿ 4 ಗ್ರಾಂ ಚಿನ್ನ ಮತ್ತು 25 ಸಾವಿರ ರೂ. ನೀಡಲಾಗಿದೆ.

ಇದನ್ನೂ ಓದಿ:ಬೆಂಗಳೂರು ಕಂಬಳ: ಚಿನ್ನದ ಪದಕ ಪಡೆದ 'ಕಾಂತಾರ ಕೋಣಗಳು'

ABOUT THE AUTHOR

...view details