ಬೆಂಗಳೂರು:ಅಕ್ಟೋಬರ್ 1ರಿಂದ ಆಸ್ತಿಗಳ ಮಾರ್ಗಸೂಚಿ ದರವು ಶೇಕಡ 30ರಷ್ಟು ಹೆಚ್ಚಳ ಆಗಲಿದೆ. ಇದರಿಂದ ನೋಂದಣಿ ಹಾಗೂ ಮುದ್ರಾಂಕ ಶುಲ್ಕವೂ ಸಹ ಹೆಚ್ಚಾಗಲಿದೆ. ಇದನ್ನು ಮನಗಂಡ ಸಾರ್ವಜನಿಕರು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಮುಂದಾಗುತ್ತಿದ್ದಾರೆ. ಪರಿಣಾಮ ಆಸ್ತಿ ನೋಂದಣಿ ಮತ್ತು ದಸ್ತಾವೇಜು ಪ್ರಕ್ರಿಯೆಯ ಜೊತೆಗೆ ರಾಜ್ಯದ ಬೊಕ್ಕಸಕ್ಕೂ ಗರಿಷ್ಠ ಪ್ರಮಾಣದ ಶುಲ್ಕ ಸಂಗ್ರಹವಾಗಿದೆ. ಆಸ್ತಿ ನೋಂದಣಿಗೆ ಒತ್ತಡಗಳು ಸೃಷ್ಟಿಯಾಗಿದ್ದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕಚೇರಿಗಳ ಸಮಯ (ಬೆಳಗ್ಗೆ 8 ಗಂಟೆಯಿಂದ ರಾತ್ರಿ 8) ಕೂಡ ವಿಸ್ತರಣೆ ಮಾಡಲಾಗಿದೆ. ಪರಿಣಾಮ ಬುಧವಾರ ರಾಜ್ಯಾದ್ಯಂತ ದಾಖಲೆಯ ಪ್ರಮಾಣದಲ್ಲಿ ಆಸ್ತಿ ನೋಂದಣಿ ಆಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಒಂದೇ ದಿನದಲ್ಲಿ ಮಾಡಲಾದ 26,058 ಆಸ್ತಿಗಳ ನೋಂದಣಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 312 ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಇದರಲ್ಲಿ ಬೆಂಗಳೂರಲ್ಲೇ ಅತಿಹೆಚ್ಚು 8377 ಆಸ್ತಿ ನೋಂದಣಿ ಆಗಿದೆ. ಮುದ್ರಾಂಕ ಮತ್ತು ನೋಂದಣಿ ಇಲಾಖೆ ಇತಿಹಾಸದಲ್ಲೇ ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಆಸ್ತಿ ನೋಂದಣಿ-ದಸ್ತಾವೇಜು ಪ್ರಕ್ರಿಯೆ ನಡೆದಿರುವುದು ಹಾಗೂ ಗರಿಷ್ಠ ಶುಲ್ಕ ಸಂಗ್ರಹ ಆಗಿರುವುದು ಹೊಸ ದಾಖಲೆಯಾಗಿದೆ.
ಕಳೆದ ಸೋಮವಾರವಷ್ಟೇ 15,936 ನೋಂದಣಿ ದಸ್ತಾವೇಜು ಪ್ರಕ್ರಿಯೆ ನಡೆದಿದ್ದು, 158.28 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಇದೀಗ ಎರಡೇ ದಿನದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುತ್ತಲೇ ಇದ್ದು, ಕಂದಾಯ-ನೋಂದಣಿ ಇಲಾಖೆ ಮತ್ತೊಂದು ಮೈಲಿಗಲ್ಲು ಮುಟ್ಟಿದಂತಾಗಿದೆ. ಕಳೆದ ಸೆಪ್ಟೆಂಬರ್ 22 ರಂದು 12,955 ಆಸ್ತಿ ನೋಂದಣಿ, ದಸ್ತಾವೇಜು ಪ್ರಕ್ರಿಯೆ ಮೂಲಕ 130.87 ಕೋಟಿ ರೂ. ಹಾಗೂ ಸೆ. 25ರಂದು 158.28 ಕೋಟಿ ರೂ. ಹಣ ಸರ್ಕಾರದ ಬೊಕ್ಕಸಕ್ಕೆ ಬಂದಿತ್ತು.
ಬೆಂಗಳೂರು ಸೇರಿದಂತೆ ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಮಂಗಳೂರು, ಮೈಸೂರು, ಶಿವಮೊಗ್ಗ ಜಿಲ್ಲೆಯ ಜನ ಇದರ ಸಬ್ ರಿಜಿಸ್ಟ್ರಾರ್ ಕಚೇರಿಯ ವಿಸ್ತರಣೆ ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪರಿಣಾಮ ಕಚೇರಿಯಲ್ಲಿ ಮೊದಲಿಗಿಂತ ಹೆಚ್ಚು ಜನಸಂದಣಿ ಇದೆ. ಮಹಾನಗರಿ ಬೆಂಗಳೂರಿನಲ್ಲಿ ಇದರ ಸದುಪಯೋಗ ತುಸು ಹೆಚ್ಚು ಎಂದೇ ಹೇಳಬಹುದು. ಉಳಿದಂತೆ ಪ್ರಮುಖ ಜಿಲ್ಲೆಯಲ್ಲಿ ಆಸ್ತಿಗಳ ನೋಂದಣಿ ಕಾರ್ಯ ಚುರುಕುಗೊಳ್ಳುತ್ತಿದೆ.
ಬೆಳಗಾವಿಯ ಸಬ್ ರಿಜಿಸ್ಟ್ರಾರ್ ಕಚೇರಿ ಬೆಳಗಾವಿಯಲ್ಲಿ ಚುರುಕುಗೊಂಡ ನೋಂದಣಿ ಕಾರ್ಯ:ಬೆಳಗಾವಿಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಆಸ್ತಿ ನೋಂದಣಿಗೆ ಬುಧವಾರ ಅಧಿಕ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಸಾಮಾನ್ಯ ದಿನಗಳಿಗಿಂತ ಈ ಅವಧಿಯಲ್ಲಿ ಆಸ್ತಿ ನೋಂದಣಿ ತುಸು ಬಿರುಸಾಗಿದೆ. ಅವಧಿ ವಿಸ್ತರಣೆಯಿಂದ ಜನರಿಗೆ ಅನುಕೂಲ ಆಗಿದೆ. ಶೇ.25ರಷ್ಟು ಜನ ಹೆಚ್ಚು ಪ್ರಮಾಣದಲ್ಲಿ ನೋಂದಣಿ ಮಾಡಿಸಲು ಆಗಮಿಸುತ್ತಿದ್ದಾರೆ. ಸಿಬ್ಬಂದಿ ಸಹ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಕ್ಟೋಬರ್ 1ರಿಂದ ನೋಂದಣಿ ಶುಲ್ಕ ಪರಿಷ್ಕರಣೆ ಆಗಲಿದೆ. 2019ರ ನಂತರ ಇದೇ ಮೊದಲ ಬಾರಿಗೆ ಪರಿಷ್ಕರಣೆ ಆಗುತ್ತಿದೆ. ಹಾಗಾಗಿ, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ನೋಂದಣಿ ಅಧಿಕಾರಿ ಮಹಾಂತೇಶ ಪಟಾತರ ಮನವಿ ಮಾಡಿದ್ದಾರೆ. ಅವಧಿ ವಿಸ್ತರಣೆಯಿಂದ ಜನರಿಗೆ ತುಂಬಾ ಅನುಕೂಲ ಆಗುತ್ತಿದೆ ಎಂದು ನೋಂದಣಿಗೆ ಆಗಮಿಸಿದ್ದವರು ಕೂಡ ಹೇಳುತ್ತಿದ್ದಾರೆ.
ಮಂಗಳೂರಿನಲ್ಲಿ ಹೆಚ್ಚಾದ ಆಸ್ತಿ ನೋಂದಣಿ:ಮಂಗಳೂರು ತಾಲೂಕಿನಲ್ಲಿ ಹಿಂದಿಗಿಂತ ಶೇಕಡ 20 ರಷ್ಟು ಹೆಚ್ಚು ಆಸ್ತಿ ನೋಂದಣಿ ಆಗುತ್ತಿದೆ. ಹಿಂದೆ 50 ರಿಂದ 60 ಆಸ್ತಿ ನೋಂದಣಿ ಆಗುತ್ತಿದ್ದರೆ, ಈಗ 70 ರಿಂದ 80 ಆಸ್ತಿ ನೋಂದಣಿ ಆಗುತ್ತಿದೆ. ಆಸ್ತಿ ನೋಂದಣಿ ಮಾಡುವವರು ಕಾವೇರಿ ತಂತ್ರಾಂಶದಲ್ಲಿ ಸ್ಲಾಟ್ ಪಡೆದು ಬರುವುದರಿಂದ ಅವರೆಲ್ಲರಿಗೂ ಆಸ್ತಿ ನೋಂದಣಿ ಮಾಡಲು ಸಾಧ್ಯವಾಗುತ್ತದೆ. ಯಾರನ್ನು ವಾಪಸ್ ಕಳುಹಿಸಲು ಆಗುವುದಿಲ್ಲ ಎಂದು ಮಂಗಳೂರು ತಾಲೂಕು ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿ ಬಶೀರ್ ಅಹಮದ್ ಅವರು ಮಾಹಿತಿ ನೀಡಿದ್ದಾರೆ.
ದಾವಣಗೆರೆ ಉಪ ನೋಂದಣಾಧಿಕಾರಿ ಎಸ್ ಎಂ ಹೇಮೇಶ್ ನೋಂದಣಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ:ದಾವಣಗೆರೆ ಜಿಲ್ಲೆಯಲ್ಲಿ ದಿನಕ್ಕೆ ಅಂದಾಜು 100 ದಸ್ತಾವೇಜುಗಳನ್ನು ನೋಂದಣಿ ಮಾಡುತ್ತಿದ್ದ ಅಧಿಕಾರಿಗಳು, ಇದೀಗ 200 ಹೆಚ್ಚು ನೋಂದಣಿ ಮಾಡುತ್ತಿದ್ದಾರೆ. ಬುಧವಾರ ಒಂದೇ ದಿನ 215 ದಸ್ತಾವೇಜುಗಳನ್ನು ನೋಂದಣಿ ಮಾಡಲಾಗಿದೆ. ಸಾಲು ಸಾಲು ರಜೆ ಇರುವುದರಿಂದ ಶುಕ್ರವಾರ ಒಂದು ದಿನ ಕೆಲಸದ ಅವಧಿ ಇದೆ. ಶನಿವಾರ ಮಧ್ಯಾಹ್ನ 12ಕ್ಕೆ ಸಿಟಿಜನ್ ಲಾಗಿನ್ ಬಂದ್ ಆಗುವುದರಿಂದ ನೋಂದಣಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ ಆಗಬಹುದು. ಹಾಗಾಗಿ ಸಾರ್ವಜನಿಕರು ಅನುಕೂಲಕ್ಕೆ ತಕ್ಕಂತೆ ಸರ್ಕಾರದ ಹೊಸ ಮಾರ್ಗಸೂಚಿಯಂತೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಉಪ ನೋಂದಣಾಧಿಕಾರಿ ಎಸ್ ಎಂ ಹೇಮೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರು ಸಬ್ ರಿಜಿಸ್ಟ್ರಾರ್ ಕಚೇರಿ ಮೈಸೂರಿನಲ್ಲಿ ಜನಸಾಗರ:ಜಿಲ್ಲೆಯಲ್ಲಿ ಆಸ್ತಿ ನೋಂದಣಿಗೆ ಜನಸಾಗರವೇ ಹರಿದು ಬರುತ್ತಿದೆ. ಮೈಸೂರಿನ ದಕ್ಷಿಣ, ಉತ್ತರ, ಪೂರ್ವ ಹಾಗೂ ಪಶ್ಚಿಮ ಭಾಗದ ನಾಲ್ಕೂ ಸಬ್ ರೆಜಿಸ್ಟರ್ ಕಚೇರಿಗಳಲ್ಲಿ ಆಸ್ತಿ ನೋಂದಣಿಗಾಗಿ ಬೆಳಗ್ಗೆಯಿಂದಲೇ ಸರತಿ ಸಾಲುಗಳಲ್ಲಿ ನಿಲ್ಲುತ್ತಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ತುಂಬಾ ಅನುಕೂಲಕರವಾಗಿದೆ. ಮಧ್ಯಮ ಹಾಗೂ ಬಡವರಿಗೆ ಇದರಿಂದ ಸಾಕಷ್ಟು ಅನುಕೂಲ. ಇನ್ನು ಹೆಚ್ಚಿನ ಸಮಯ ವಿಸ್ತರಣೆ ಮಾಡಿದ್ದರೆ ಒಳ್ಳೆಯದಾಗಿರುತಿತ್ತು ಎಂದು ಜಿಲ್ಲೆಯ ಜನ ಹರ್ಷ ವ್ಯಕ್ತಪಡಿಸಿದ್ದಾರೆ. ಕೆಲವೆಡೆ ನೆಟ್ವರ್ಕ್ ಸಮಸ್ಯೆ ಇದ್ದು ಆಸ್ತಿ ನೋಂದಣಿ ನಿಧಾನವಾಗಿ ನಡೆಯುತ್ತಿರುವುದು ಕಂಡು ಬಂದಿತು.
ಹೆಚ್ಚಾದ ಸರ್ಕಾರ ಆದಾಯ: ಆಸ್ತಿ ಮಾರಾಟ ಹಾಗೂ ಖರೀದಿಗೆ ಹೆಚ್ಚಿನ ಕಾಲಾವಕಾಶ ನೀಡಿದ್ದರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಆಸ್ತಿಗಳು ಮಾರಾಟವಾಗುತ್ತಿವೆ. ಸರ್ಕಾರದ ಆದಾಯ ಕೂಡ ಹೆಚ್ಚಾಗಿದೆ. ಮುಂದೆ ಹೆಚ್ಚಿನ ತೆರಿಗೆ ಕಟ್ಟಬೇಕಾಗುತ್ತದೆ ಎಂಬ ಕಾರಣದಿಂದ ಜಿಲ್ಲೆಯ ಜನ ಕೂಡ ಬೇಗ ಬೇಗ ಬಂದು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಬೆಳಗ್ಗೆ ತಮ್ಮ ಕೆಲಸ ಮುಗಿಸಿಕೊಂಡು ರಾತ್ರಿ ನೋಂದಣಿ ಮಾಡಿಸಿಕೊಳ್ಳುತ್ತಿರುವುದು ಕಂಡು ಬಂದಿತು. ಅಧಿಕಾರಿಗಳು ತಮ್ಮ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಬುಧವಾರ ಒಂದೇ ದಿನ 100ಕ್ಕೂ ಹೆಚ್ಚು ಆಸ್ತಿ ನೋಂದಣಿಯಾಗಿದೆ. ಈ ಸಂಖ್ಯೆ ನಾಳೆ ಹೆಚ್ಚಾಗುವ ಸಾಧ್ಯತೆ ಕೂಡ ಇದೆ.
ಶಿವಮೊಗ್ಗದ ಸಬ್ ರಿಜಿಸ್ಟ್ರಾರ್ ಕಚೇರಿ ಇಷ್ಟು ದೊಡ್ಡ ಮೊತ್ತ ಯಾವ ರಾಜ್ಯವೂ ಸಂಗ್ರಹಿಸಿಲ್ಲ: ಕಾವೇರಿ 2ಕ್ಕೆ ಧನ್ಯವಾದಗಳು. ನಾವು ಬುಧವಾರ ದಾಖಲೆಯ 26,058 ದಾಖಲೆಗಳನ್ನು ನೋಂದಾಯಿಸಿದ್ದೇವೆ. ಅಭೂತಪೂರ್ವ ಮತ್ತು ಅಪ್ರತಿಮ ಸಾಧನೆ ಇದಾಗಿದೆ. ಒಂದೇ ದಿನದಲ್ಲಿ ಆಸ್ತಿ ನೋಂದಣಿ ಮೂಲಕ ₹ 312 ಕೋಟಿ ಆದಾಯ ಸಂಗ್ರಹವಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಬೇರೆ ಯಾವ ರಾಜ್ಯವೂ ಸಂಗ್ರಹಿಸಿಲ್ಲ. ಕಾವೇರಿ 2 ಸಾಫ್ಟ್‌ವೇರ್ ಅಳವಡಿಕೆಯು ನಮಗೆ ಸಹಾಯ ಮಾಡಿತು. ಇದು ಮಾನವ ಸಂಪನ್ಮೂಲ ಮಧ್ಯೆ ಪ್ರವೇಶಿಸುವಿಕೆಯನ್ನು ತೆಗೆದುಹಾಕಿದೆ. ವ್ಯವಸ್ಥೆಯ ಯಶಸ್ಸಿನ ಮೇಲಿನ ಅನುಮಾನಗಳನ್ನು ನಿವಾರಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಬುಧವಾರ ಒಂದೇ ದಿನ ದಾಖಲೆಯ 26 ಸಾವಿರ ಆಸ್ತಿ ನೋಂದಣಿ.. 312 ಕೋಟಿ ರೂ. ಆದಾಯ ಸಂಗ್ರಹ