ಬೆಂಗಳೂರು: ನಗರದ ಪಶ್ಚಿಮ ಅಂಚೆ ಇಲಾಖೆ ವಿಭಾಗ ಪ್ರಾಯೋಗಿಕವಾಗಿ ಆರಂಭಿಸಿದ ಪಾರ್ಸೆಲ್ ಆನ್ ವ್ಹೀಲ್ಸ್ ಯೋಜನೆಗೆ ಭರ್ಜರಿ ಸ್ಪಂದನೆ ಸಿಕ್ಕ ಹಿನ್ನೆಲೆಯಲ್ಲಿ ನಗರದಲ್ಲಿ ಉಳಿದ ಮೂರು ವಿಭಾಗಗಳಲ್ಲಿ ಇದನ್ನು ವಿಸ್ತರಣೆ ಮಾಡಲು ಮುಂದಾಗಿದೆ. ಜೂನ್ 6ರಂದು ಪೀಣ್ಯ ಹಾಗೂ ಅಬ್ಬಿಗೆರೆ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಆರಂಭಿಸಿದ್ದ ಬಾಗಿಲಿಗೆ ಬಂದು ಸರಕು ಒಯ್ಯುವ ವಾಹನಗಳ ಸೇವೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಅದರಲ್ಲೂ ಕೈಗಾರಿಕೆಗಳು ತಮ್ಮ ಸರಕುಗಳನ್ನು ಸಾಗಿಸಲು ಹೆಚ್ಚಾಗಿ ಅಂಚೆ ಇಲಾಖೆಯ ವಾಹನವನ್ನು ಬಳಕೆ ಮಾಡಿವೆ. ರಾಜ್ಯದ ನಾನಾ ಕಡೆ ಸೇರಿ ಹೊರ ರಾಜ್ಯಗಳಿಗೂ ಸರಕು ಸಾಗಣೆಯಾಗಿದೆ. ವಾರಾಂತ್ಯ ಹೊರತುಪಡಿಸಿ ಉಳಿದ ದಿನಗಳಲ್ಲಿ ಹೆಚ್ಚಿನ ಪಾರ್ಸೆಲ್‌ಗಳು ಅಂಚೆ ವಾಹನದಲ್ಲಿ ಹೋಗಿವೆ. ಬುಧವಾರ ಒಂದೇ ದಿನ ಕೈಗಾರಿಕೆಯೊಂದರ 675ಕ್ಕೂ ಹೆಚ್ಚಿನ ಸರಕುಗಳನ್ನು ಅಂಚೆ ವಾಹನ ಸಾಗಿಸಿದೆ. ಪ್ರಾಯೋಗಿಕ ಸೇವೆಯಲ್ಲೇ 989 ಸರಕು ಸಾಗಿಸಿದ್ದು, 85 ಸಾವಿರಕ್ಕೂ ಹೆಚ್ಚಿನ ಆದಾಯ ಬಂದಿದೆ, ಹೀಗಾಗಿ ಯೋಜನೆಯನ್ನು ಇತರೆ ವಿಭಾಗಗಳಲ್ಲೂ ವಿಸ್ತರಿಸಿ ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಅಂಚೆ ಇಲಾಖೆ ಮುಂದಾಗಿದೆ.
ಎಂ.ಜಿ. ರಸ್ತೆಯ ಮಣಿಪಾಲ್ ಸೆಂಟರ್ ಬಳಿ ಆರಂಭ:ಇದೀಗ ನಗರದ ಪಶ್ಚಿಮ ಭಾಗದಲ್ಲಿ ಅಂಚೆ ವಾಹನಗಳು ಮನೆ ಬಾಗಿಲಿಗೆ ಬಂದು ಪಾರ್ಸೆಲ್ ಒಯ್ಯುತ್ತಿವೆ. ಯೋಜನೆ ವಿಸ್ತರಣೆ ಭಾಗವಾಗಿ ಮುಂದಿನ ವಾರ ನಗರದ ಮಧ್ಯ ಭಾಗವಾದ ಎಂ.ಜಿ.ರಸ್ತೆಯ ಮಣಿಪಾಲ್ ಸೆಂಟರ್ ಬಳಿಯಲ್ಲಿ ಇನ್ನೊಂದು ವಾಹನವನ್ನು ರಸ್ತೆಗಿಳಿಸಲು ಅಂಚೆ ಇಲಾಖೆ ನಿರ್ಧರಿಸಿದೆ. ಬಳಿಕ ಹಂತ ಹಂತವಾಗಿ ಮುಂದಿನ ತಿಂಗಳಲ್ಲಿ ಪೂರ್ವ ಭಾಗ ಮಹಾದೇವಪುರ ಕೈಗಾರಿಕಾ ಏರಿಯಾ, ಹಾಗೂ ದಕ್ಷಿಣ ಬೆಂಗಳೂರಿನ ಬಿಕಾಸಿಪುರ ಕೈಗಾರಿಕಾ ಪ್ರದೇಶ ನಗರದಲ್ಲಿ ಪಾರ್ಸೆಲ್ ಆನ್ ವ್ಹೀಲ್ಸ್ ಜಾರಿಗೆ ಬರಲಿದೆ ಎಂದು ಅಂಚೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.