ಬೆಂಗಳೂರು:ಕಡಿಮೆ ಹಾಜರಾತಿ ಕಾರಣದಿಂದಾಗಿ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆ ತಪ್ಪಿಸಿಕೊಂಡ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಖಾಸಗಿ ಅಭ್ಯರ್ಥಿಗಳಾಗಿ ಪೂರಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶಿಸಿದೆ. ಕೂಡಲೇ ಅಂತಹ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಸೂಚಿಸಲಾಗಿದೆ.
2022 -23ನೇ ಸಾಲಿನ ಮುಖ್ಯ ಪರೀಕ್ಷೆಗೆ ನೋಂದಾಯಿಸಿಕೊಂಡು ನಿಯಮಾನುಸಾರ ಕನಿಷ್ಠ ಶೇ.75ರಷ್ಟು ಹಾಜರಾತಿ ಕೊರತೆಯಿಂದಾಗಿ ರಾಜ್ಯಾದ್ಯಂತ ಅಂದಾಜು 26,900 ವಿದ್ಯಾರ್ಥಿಗಳ ನೋಂದಣಿಯನ್ನು ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲಿ ರದ್ದುಪಡಿಸಿದ್ದರು. ಹೀಗಾಗಿ, 2022 -23ನೇ ಸಾಲಿನ ಮುಖ್ಯ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಠಿಯಿಂದ ಹಾಗೂ ಸದರಿ ವಿದ್ಯಾರ್ಥಿಗಳು ಮುಂದಿನ ಉನ್ನತ ಶಿಕ್ಷಣದ ವ್ಯಾಸಂಗದಿಂದ ವಂಚಿತರಾಗದಂತೆ ಕ್ರಮ ವಹಿಸುವ ಸಲುವಾಗಿ ಇಂತಹ ವಿದ್ಯಾರ್ಥಿಗಳಿಗೆ ಮಾತ್ರ ಜೂನ್ 2023ರಲ್ಲಿ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ನೋಂದಾಯಿಸಲು ಅವಕಾಶ ನೀಡಲಾಗಿದೆ.
ಜೂನ್ 2023 ರ ಪೂರಕ ಪರೀಕ್ಷೆಯು ಈ ಅಭ್ಯರ್ಥಿಗಳಿಗೆ ಪ್ರಥಮ ಪ್ರಯತ್ನವಾಗಿದ್ದು, ಉತ್ತೀರ್ಣರಾಗಲು ಈ ಪರೀಕ್ಷೆಯಿಂದ ಸತತ ಆರು ಪ್ರಯತ್ನಗಳ ಅವಕಾಶ ಕಲ್ಪಿಸಲಾಗಿರುತ್ತದೆ. ಈ ವಿದ್ಯಾರ್ಥಿಗಳು ಮಾರ್ಚ್ ಮುಖ್ಯ ಪರೀಕ್ಷೆಗೆ ನೋಂದಾಯಿಸಿ ಈಗಾಗಲೇ ಪರೀಕ್ಷಾ ಶುಲ್ಕ ಪಾವತಿಸಿದ್ದಾರೆ. ಆದ್ದರಿಂದ ಜೂನ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಖಾಸಗಿ ಅಭ್ಯರ್ಥಿಯಾಗಿ ನೋಂದಾಯಿಸಿ ಪರೀಕ್ಷೆಗೆ ಹಾಜರಾಗಲು ನೋಂದಣಿ ಶುಲ್ಕ ರೂ. 205/ ಮಾತ್ರ ಪಾವತಿಸಿಬೇಕಿದೆ. ಈ ವಿದ್ಯಾರ್ಥಿಗಳ ನೋಂದಣಿಗೆ ದಿ: 23.05.2023 ರಿಂದ 26.05.2023 ರವರೆಗೆ ಅವಕಾಶವಿದೆ.
ವಿದ್ಯಾರ್ಥಿಗಳಿಂದ ಸ್ವೀಕರಿಸಿದ ನೋಂದಣಿ ಶುಲ್ಕವನ್ನು ಮಂಡಳಿಯ NEFT ಚಲನ್‌ನಲ್ಲಿ ಭರ್ತಿ ಮಾಡಿ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಜಮೆ ಮಾಡಲು ದಿ: 27.05.2023 ರಿಂದ 29.05.2023ರ ವರೆಗೆ ಅವಕಾಶವಿದೆ. ಮಂಡಳಿ ಜಾಲತಾಣದ ಶಾಲಾ ಲಾಗಿನ್ನಲ್ಲಿ ಇಂತಹ ಅರ್ಹ ವಿದ್ಯಾರ್ಥಿಗಳನ್ನು ಕೂಡಲೇ ನಿಯಮಾನುಸಾರ ನೋಂದಾಯಿಸಿ ಮತ್ತು ನೋಂದಣಿ ಶುಲ್ಕವನ್ನು ಬ್ಯಾಂಕಿಗೆ ಪಾವತಿಸುವುದು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರ ಜವಾಬ್ದಾರಿ. ಅಂತಿಮ ದಿನಾಂಕದ ನಂತರ ನೋಂದಣಿಗೆ ಅವಕಾಶವಿಲ್ಲ. ಒಂದು ವೇಳೆ ಅಂತಿಮ ದಿನಾಂಕದ ನಂತರವೂ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.