ಬೆಂಗಳೂರು :ಕೊರೊನಾ ಸಂಕಷ್ಟದಲ್ಲಿರುವ ರಾಜ್ಯದ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್. ಆದರೆ, ಇನ್ನೊಂದು ಕಡೆ ಚಾಲಕರಿಗೆ ಸಿಹಿ ಸುದ್ದಿಯೊಂದನ್ನ ರಾಜ್ಯ ಸರ್ಕಾರ ನೀಡಿದೆ. ಟ್ಯಾಕ್ಸಿ, ಸಿಟಿ ಟ್ಯಾಕ್ಸಿ ಹಾಗೂ ಇನ್ನಿತರ ಟ್ಯಾಕ್ಸಿ ದರ ಪರಿಷ್ಕರಣೆ ಮಾಡಿ ಸರ್ಕಾರ ಆದೇಶಿಸಿದೆ.
ಹವಾನಿಯಂತ್ರಣ ರಹಿತ ಟ್ಯಾಕ್ಸಿ, ಎಸಿ ಟ್ಯಾಕ್ಸಿ, ಕಾಯುವಿಕೆ ದರ, ಲಗೇಜ್ ದರ, ರಾತ್ರಿ ದರದ ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ. ಇಂದಿನಿಂದಲೇ ಈ ಪರಿಷ್ಕರಣೆಯ ಆದೇಶ ಜಾರಿಯಾಗಲಿದೆ. ಇನ್ನು, ದರ ಪರಿಷ್ಕರಣೆ ಮಾಡುವಂತೆ ಇಂದು ಫ್ರೀಡಂ ಪಾರ್ಕ್‌ನಲ್ಲಿ ಅರಬೆತ್ತಲೆ ಹೋರಾಟವನ್ನ ಚಾಲಕರು ನಡೆಸಿದರು.
ತೈಲ ದರ ಹೆಚ್ಚಳವಾದ ಕಾರಣದಿಂದ ದರ ಪರಿಷ್ಕರಣೆ ಮಾಡುವಂತೆ ಚಾಲಕರು ಪ್ರತಿಭಟನೆ ನಡೆಸಿದ್ಧಾರೆ. ಹೀಗಾಗಿ, ತತ್‍ಕ್ಷಣದಿಂದ ದರ ಪರಿಷ್ಕರಣೆ ಮಾಡಿ ಸರ್ಕಾರ ಆದೇಶಿಸಿದೆ.
ಯಾವೆಲ್ಲಾ ಟ್ಯಾಕ್ಸಿಗಳಿಗೆ ಎಷ್ಟೆಷ್ಟು ದರ ಪರಿಷ್ಕರಣೆ?
1. ಹವಾನಿಯಂತ್ರಣ ಟ್ಯಾಕ್ಸಿ - ನಿಗದಿತ ರೂ 75.00 ( ಕನಿಷ್ಠ 4 ಕಿಮೀ. ವರೆಗೆ) ಪ್ರತಿ ಕಿಮೀ ರೂ.18.00
2. ಹವಾನಿಯಂತ್ರಿತ ಟ್ಯಾಕ್ಸಿ- ನಿಗದಿತ ದರ ( ರೂ 100. (ಕನಿಷ್ಠ 4. ಕಿಮೀ ವರೆಗೆ) ಪ್ರತಿ ಕಿ.ಮೀಗೆ ರೂ 24
3. ಕಾಯುವಿಕೆ ದರಗಳು- ಮೊದಲ 5 ನಿಮಿಷಗಳ ವರೆಗೆ ಉಚಿತ ನಂತರದ ಪ್ರತಿ ನಿಮಿಷಕ್ಕೆ ರೂ. 1
4.ಲಗೇಜು ದರಗಳು- ಮೊದಲಿನ 120 ಕೆ.ಜಿ ವರೆಗೆ ಉಚಿತ ( ಸೂಟ್ ಕೇಸ್ ಬೆಡ್ಡಿಂಗ್ ಇತ್ಯಾದಿ ವೈಯಕ್ತಿಕ ಲಗೇಜುಗಳು ನಂತರದ ಪ್ರತಿ 20 ಕಿ ಗ್ರಾಂ ಗೆ ಅಥವಾ ಅದರ ಭಾಗಕ್ಕೆ ರೂ 7)
5. ರಾತ್ರಿ ದರಗಳು- ರಾತ್ರಿ 12.00 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣ ದರದ ಮೇಲೆ ಶೇ.10 ರಷ್ಟು ಹೆಚ್ಚುವರಿ ದರ ಹಾಕಲಾಗಿದೆ. ರಾತ್ರಿ ಸಂಚಾರ ಮಾಡುವ ಟ್ಯಾಕ್ಸಿ ಪ್ರಯಾಣಿಕರಿಗೆ ಶೇ.10ರಷ್ಟು ಹೆಚ್ಚುವರಿ ದರ ನಿಗದಿ ಮಾಡಲಾಗಿದೆ.