ಬೆಂಗಳೂರು: ಸಾರಿಗೆ ಸಿಬ್ಬಂದಿಗೆ ಕೆಎಸ್‌ಆರ್‌ಟಿಸಿ ಗುಡ್ ನ್ಯೂಸ್ ನೀಡಿದೆ. ನಿಗಮದ ಸಮಸ್ತ ಸಿಬ್ಬಂದಿಗೆ ಅಕ್ಟೋಬರ್ನಿಂದ ಪ್ರತಿ ತಿಂಗಳ 1ನೇ ತಾರೀಖಿನಂದು ವೇತನ ಪಾವತಿ ಮಾಡುವ ವ್ಯವಸ್ಥೆ ಜಾರಿ ಮಾಡುತ್ತಿರುವುದಾಗಿ ಪ್ರಕಟಿಸಿದೆ.
ಹೌದು, ಪ್ರತಿ ತಿಂಗಳು ವೇತನ ಯಾವಾಗ ಬರಲಿದೆ ಎಂದು ಕಾಯುವ ಪರಿಸ್ಥಿತಿಯಿಂದ ಇನ್ಮುಂದೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಕ್ತವಾಗಲಿದ್ದಾರೆ. ವೇತನಕ್ಕಾಗಿ ವಾರಗಟ್ಟಲೇ ಕಾಯುತ್ತಾ ಕುಟುಂಬ ನಿರ್ವಹಣೆಗೆ ಕಷ್ಟಪಡಬೇಕಾದ ಸ್ಥಿತಿಯನ್ನು ಎದುರಿಸುತ್ತಿರುವ ನಿಗದ ಸಿಬ್ಬಂದಿಯ ಕಷ್ಟವನ್ನು ಅರ್ಥಮಾಡಿಕೊಂಡು, ನಿಗಮ ಆರ್ಥಿಕ ಸಮಸ್ಯೆ ನಡುವೆಯೂ ಪ್ರತಿ ತಿಂಗಳು ಒಂದನೇ ತಾರೀಖಿನಂದೇ ಎಲ್ಲ ಸಿಬ್ಬಂದಿಗೆ ವೇತನ ಪಾವತಿ ಮಾಡುವ ವ್ಯವಸ್ಥೆ ಘೋಷಿಸಿದೆ.
ಸಾರಿಗೆ ಸಿಬ್ಬಂದಿಗೆ ವೇತನ ಪಾವತಿ: ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಸಾರಿಗೆ ಸಂಸ್ಥೆಯ ಆತ್ಮವೇ ನಮ್ಮ ಕಾರ್ಮಿಕ ಬಂಧುಗಳು. ಅವರ ಕ್ಷೇಮಾಭಿವೃದ್ಧಿ, ಹಿತಾಸಕ್ತಿ ಕಾಪಾಡುವುದು ಹಾಗೂ ಅವರ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ.
ಈ ನಿಟ್ಟಿನಲ್ಲಿ ಅಕ್ಟೋಬರ್-2022 ತಿಂಗಳಿಂದ ಪ್ರಪ್ರಥಮ ಬಾರಿಗೆ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಸಮಸ್ತ ಸಿಬ್ಬಂದಿಗೆ ಪ್ರತಿ ತಿಂಗಳ 1 ರಂದೇ ವೇತನ ಪಾವತಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.