ಬೆಂಗಳೂರು:ಅತ್ಯುತ್ತಮ ಆಡಳಿತದಿಂದ ಅಚ್ಚಳಿಯದ ಛಾಪು ಮೂಡಿಸಿದ್ದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಗುಡ್ ಗವರ್ನೆನ್ಸ್ ಡೇ (ಸುಶಾಸನ ದಿನ) ಯನ್ನಾಗಿ ಆಚರಿಸಲಾಗುತ್ತಿದ್ದು, ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ ಎಂದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ನಾರಯಣ್ ತಿಳಿಸಿದ್ದಾರೆ.
ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಅಟಲ್ ಜೀ ಅವರ ಗೌರವಾರ್ಥ ಸುಶಾಸನ ದಿನವನ್ನು ಆಯೋಜಿಸಲಾಗಿದ್ದು, ಆಡಳಿತದಲ್ಲಿ ವಾಜಪೇಯಿ ಅವರ ಕನಸುಗಳನ್ನು ಸಾಕಾರ ಮಾಡಲು ಈ ಮೂಲಕ ಹೆಜ್ಜೆ ಇರಿಸಲಾಗಿದೆ ಎಂದರು.
ಹೀಗಿರಲಿದೆ ಕಾರ್ಯಕ್ರಮ : ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಸೇರಿದಂತೆ ಇತರ ಪ್ರಮುಖರು ಭಾಗಿಯಾಗಲಿದ್ದಾರೆ. ಇದೇ ವೇಳೆ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗೆ ಸಂಬಂಧಿಸಿ ಪ್ರಸೆಂಟೇಶನ್ ಇರುತ್ತದೆ ಎಂದು ತಿಳಿಸಿದರು.