ಕರ್ನಾಟಕ

karnataka

ETV Bharat / state

'ಗೋಲ್ಡನ್​​ ಚಾರಿಯಟ್​​' ಐಷಾರಾಮಿ ಪ್ರವಾಸಿ ರೈಲು ಸಂಚಾರಕ್ಕೆ ಬ್ರೇಕ್​​ ಹಾಕಿದ ಸರ್ಕಾರ​​!

ಐಷಾರಾಮಿ ಪ್ರವಾಸಿ ರೈಲು "ಗೋಲ್ಡನ್ ಚಾರಿಯಟ್" ಸುವರ್ಣ ರಥ ಸಂಚಾರಕ್ಕೆ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಬ್ರೇಕ್ ಹಾಕಿದೆ.

By

Published : Oct 10, 2019, 9:17 PM IST

Updated : Oct 11, 2019, 1:48 AM IST

" ಗೋಲ್ಡನ್ ಚಾರಿಯೆಟ್ " ಐಷಾರಾಮಿ ಪ್ರವಾಸಿ ರೈಲು ಸಂಚಾರಕ್ಕೆ ಬಿಜೆಪಿ ಸರ್ಕಾರದ ರೆಡ್ ಸಿಗ್ನಲ್

ಬೆಂಗಳೂರು:ರಾಜ್ಯ ಮತ್ತು ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಐಷಾರಾಮಿ ಸೌಲಭ್ಯಗಳೊಂದಿಗೆ ಕರೆದೊಯ್ಯುತ್ತಿದ್ದ ಪ್ರತಿಷ್ಠಿತ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪ್ರತಿಷ್ಠಿತ ಪ್ರವಾಸಿ ರೈಲು, ಹಳಿಗಳ ಮೇಲೆ ಅರಮನೆ, ಸುವರ್ಣ ರಥ ಎಂದೆಲ್ಲಾ ಹೆಸರುವಾಸಿಯಾಗಿದ್ದ ಗೋಲ್ಡನ್ ಚಾರಿಯಟ್​ ರೈಲಿನಿಂದ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗುತ್ತಿದ್ದ ಕಾರಣಕ್ಕೆ ರೈಲಿನ ಸಂಚಾರಕ್ಕೆ ರಾಜ್ಯ ಸರ್ಕಾರ ರೆಡ್ ಸಿಗ್ನಲ್ ನೀಡಿದೆ.

ತೀವ್ರ ನಷ್ಟದಿಂದಾಗಿ ರೈಲಿನ ಸಂಚಾರ ಮುನ್ನಡೆಸಲು ಸಾಧ್ಯವಾಗದೆ ಗೋಲ್ಡನ್ ಚಾರಿಯಟ್ ರೈಲು ಸೌಲಭ್ಯ ಸ್ಥಗಿತಗೊಳಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರದಿಂದ ಮಾರ್ಚ್​ ತಿಂಗಳವರೆಗೆ ರಾಜ್ಯದ ಸುಪ್ರಸಿದ್ಧ ಬಾದಾಮಿ, ಹಂಪಿ, ಐಹೊಳೆ, ಪಟ್ಟದಕಲ್ಲು, ಹಳೇಬೀಡು, ಕಬಿನಿ, ನಾಗರಹೊಳೆ, ಬಂಡೀಪುರ, ಮೈಸೂರು, ಬೆಂಗಳೂರಿನ ಪ್ರವಾಸಿ ತಾಣಗಳಿಗೆ ದೇಶ - ವಿದೇಶದ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು.

ತಿಂಗಳಲ್ಲಿ ಹದಿನೈದು ದಿನ ರಾಜ್ಯದ ಪ್ರವಾಸಿ ಕ್ಷೇತ್ರಗಳು ಹಾಗೂ ಉಳಿದ ಹದಿನೈದು ದಿನಗಳಲ್ಲಿ ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ತಾಣಗಳಾದ ಬೆಂಗಳೂರು , ಚೆನ್ನೈ, ಮಹಾಬಲಿಪುರಂ, ಪುದುಚೇರಿ, ತಂಜಾವೂರು, ತಿರುಚಿರಾಪಳ್ಳಿ, ಮಧುರೈ, ಕನ್ಯಾಕುಮಾರಿ, ತಿರುವನಂತಪುರಂ, ಕೊಚ್ಚಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು. ಪ್ರವಾಸಿ ರೈಲಿನ ದರ ಸಹ ಲಕ್ಷಾಂತರ ರೂಪಾಯಿ ಇರುತ್ತಿತ್ತು.

ಕಳೆದ ವರ್ಷ ರಾಜ್ಯದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಭಾರತೀಯ ಪ್ರವಾಸಿಗಳಿಗೆ ಒಬ್ಬರಿಗೆ 2.45 ಲಕ್ಷ, ಇಬ್ಬರಿಗೆ 3.50 ಲಕ್ಷ, ವಿದೇಶಿ ಪ್ರವಾಸಿಗಳಿಗೆ ಒಬ್ಬರಿಗೆ 3.85 ಲಕ್ಷ, ಇಬ್ಬರಿಗೆ 6.30 ಲಕ್ಷ ದರ ನಿಗದಿಗೊಳಿಸಲಾಗಿತ್ತು‌. ದುಬಾರಿ ದರ ಎನ್ನುವ ಆಪಾದನೆಗೆ ಗೋಲ್ಡನ್ ಚಾರಿಯಟ್ ಒಳಗಾಗಿತ್ತಾದರೂ ಐಷಾರಾಮಿ ಸೌಲಭ್ಯಗಳಿಗಾಗಿ ಹೆಚ್ಚಿನ ದರ ವಿಧಿಸಲಾಗುತ್ತದೆ ಎಂದು ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಸಮರ್ಥಿಸಿಕೊಂಡಿತ್ತು.

ಹೆಚ್ಚಿನ ದರಗಳಿಂದಾಗಿ ಪ್ರವಾಸಿಗರು ಗೋಲ್ಡನ್ ಚಾರಿಯಟ್ ರೈಲಿನತ್ತ ಸುಳಿಯುತ್ತಿರಲಿಲ್ಲ. ಇದರಿಂದ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪ್ರತಿ ವರ್ಷ ನಷ್ಟದ ಮೇಲೆ ನಷ್ಟ ಅನುಭವಿಸಿ ಈಗ ಮತ್ತಷ್ಟು ನಷ್ಟ ತಾಳಲಾರದೇ ರಾಜ್ಯದಲ್ಲಿ ಹೊಸದಾಗಿ ಆಡಳಿತಕ್ಕೆ ಬಂದಿರುವ ಬಿಜೆಪಿ ಸರ್ಕಾರ ಸುವರ್ಣ ರಥದ ಓಡಾಟಕ್ಕೆ ಕೆಂಪು ಬಾವುಟ ತೋರಿಸಿ ನಿಲ್ಲಿಸಿದೆ. 2008ರಲ್ಲಿ ಸುವರ್ಣ ಕರ್ನಾಟಕ ವರ್ಷಾಚರಣೆ ಸವಿನೆನಪಿಗೆ ಪಂಚತಾರಾ ಹೋಟೆಲ್ ಸೌಲಭ್ಯಗಳನ್ನು ಒಳಗೊಂಡ ಗೋಲ್ಡನ್ ಚಾರಿಯಟ್ ಪ್ರವಾಸಿ ರೈಲು ಸಂಚಾರ ಆರಂಭಿಸಲಾಗಿತ್ತು. ಹತ್ತು ವರ್ಷಗಳ ನಂತರ ರೈಲು ಸಂಚಾರ ಪ್ರವಾಸಿಗರಿಗೆ ಲಭ್ಯವಿಲ್ಲದಂತಾಗಿದೆ.

Last Updated : Oct 11, 2019, 1:48 AM IST

ABOUT THE AUTHOR

...view details